karnataka election 2023 | ‘ಕೈ’ ಭಾರತ್ ಜೋಡೋ ಯಾತ್ರೆ.. ‘ಜೆಡಿಎಸ್’ ಪಂಚರತ್ನ ರಥಯಾತ್ರೆ.. ಬಿಜೆಪಿ ?
ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿನ ಮೂರು ಪಕ್ಷಗಳು ಚುನಾವಣೆಗೆ ಸಿದ್ಧವಾಗುತ್ತಿವೆ.
ಅದರಲ್ಲೂ ವಿಪಕ್ಷ ಕಾಂಗ್ರೆಸ್ ಕಳೆದ ಒಂದು ವರ್ಷದಿಂದಲೇ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಾ ಬಂದಿದೆ.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಪಕ್ಷದ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪುವ ಕೆಲಸ ಮಾಡಿದೆ.
ಪಾದಯಾತ್ರೆ, ಸಮಾವೇಶಗಳ ಮೂಲಕ ಚುನಾವಣೆಗೆ ರೆಡಿಯಾಗುತ್ತಿದೆ.
ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬದ ಭಾಗವಾಗಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮ ಕಾಂಗ್ರೆಸ್ ಗೆ ಬೂಸ್ಟ್ ನೀಡಿದೆ.

ಇದಾದ ಬಳಿಕ ಫ್ರೀಡಂ ಮಾರ್ಚ್, ಪೇ ಸಿಎಂ ಪೋಸ್ಟರ್ ಅಭಿಯಾನ, ಇದೀಗ ಭಾರತ್ ಜೋಡೋ ಯಾತ್ರೆ ಮೂಲಕ ಚುನಾವಣೆಗೆ ನಾವು ರೆಡಿ ಎಂಬುದನ್ನ ಸಾರಿ ಹೇಳುತ್ತಿದೆ.
ಈ ಬಾರಿ ಕಾಂಗ್ರೆಸ್ ತುಸು ಆಕ್ರಮಣಕಾರಿಯಾಗಿ ಚುನಾವಣಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ.
ಈಗಾಗಲೇ ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರ ಮಾಡುತ್ತಾ ಆಡಳಿತ ರೂಢ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇದು ಒಂದು ಕಡೆಯಾದರೇ ಮತ್ತೊಂದು ವಿರೋಧ ಪಕ್ಷ ಜೆಡಿಎಸ್ ಕೂಡ ಚುನಾವಣಾ ರಣಕಹಳೆ ಮೊಳಗಿಸಲು ಮುಂದಾಗಿದೆ.
ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಿಂದ ಜೆಡಿಎಸ್ ಪಕ್ಷ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಆರಂಭವಾಗಲಿದೆ.

ಆ ಮೂಲಕ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಚುನಾವಣೆಗೆ ರಣಕಹಳೆ ಮೊಳಗಿಸಲಿದೆ.
ಆದ್ರೆ ಆಡಳಿತರೂಢ ಬಿಜೆಪಿ ಮಾತ್ರ ಚುನಾವಣಾ ರಣಕಹಳೆ ಮೊಳಗಿಸಿಲ್ಲ. ಜನಸ್ಪಂದನಾ ಕಾರ್ಯಕ್ರಮ ಮಾಡಿದ್ರೂ ಅದು ಅಂದುಕೊಂಡಷ್ಟು ಯಶಸ್ಸು ಕಂಡಿಲ್ಲ.
ಹೀಗಾಗಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಬಿಜೆಪಿ ಪ್ಲಾನ್ ಮಾಡುತ್ತಿದೆ.
ಮೂಲಗಳ ಪ್ರಕಾರ ಬಿಜೆಪಿಯ ರಾಜಾಹುಲಿ ಬಿ.ಎಸ್.ವೈ ನೇತೃತ್ವದಲ್ಲಿ ರಾಜ್ಯ ಪ್ರವಾಸ ಮಾಡಲು ಕೇಸರಿ ಪಡೆ ಪ್ಲಾನ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.