Karnataka Election 2023 : ಚುನಾವಣಾ ದಿನಾಂಕ ಪ್ರಕಟ ; ಮೇ 10 ರಂದು ಮತದಾನ – ಮೇ 13 ರಂದು ಫಲಿತಾಂಶ….
ಕರ್ನಾಟಕದ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು ರಾಜ್ಯದಾದ್ಯಂತ ಏಕಕಾಲಕ್ಕೆ ಮೇ 10 ರಂದು ಚುನಾವಣೆ ನಡೆಯಲಿದೆ. ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಕಲಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹೇಳಿದ್ದಾರೆ.
ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳು ಇರಲಿವೆ. ಒಂದು ಮತಗಟ್ಟೆಯಲ್ಲಿ 883 ಜನ ಮತ ಹಾಕಬಹುದಾಗಿದೆ. ನಗರ ಪ್ರದೇಶಗಳಲ್ಲಿ 24,063 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 34,219 ಮತಗಟ್ಟೆಗಳು ಇರಲಿವೆ.
ಕರ್ನಾಟಕದಲ್ಲಿ ಪುರುಷ ಮತದಾರರು 2,62,42,561 ಇದ್ದು, 2,59,26,319 ಮಹಿಳಾ ಮತದಾರರು ಇದ್ದಾರೆ. ಇನ್ನು ಕರ್ನಾಟಕದಲ್ಲಿ 4,699 ತೃತೀಯ ಲಿಂಗಿಗಳು ಮತದಾರರು ಇದ್ದು, 12.15 ಲಕ್ಷ ಯುವ ಮತದಾರರು ಇದ್ದಾರೆ.
Karnataka Election 2023: Election Date Announced; Polling on May 10 – Result on May 13….