karnataka election 2023 | ಮಂಕಾಯ್ತಾ ಬಿಜೆಪಿ – ‘ಕೈ’ ಅಬ್ಬರಿಸುತ್ತಿದ್ದರೂ ಸೈಲೆಂಟ್ ಆಗಿರೋದ್ಯಾಕೆ ಕೇಸರಿ ?
ಯಾಕೋ ಎನೋ ರಾಜ್ಯ ಬಿಜೆಪಿ ಸದ್ಯಕ್ಕೆ ಮಂಕಾದಂತೆ ಕಾಣುತ್ತಿದೆ. ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದರೂ ಕೇಸರಿ ಪಡೆ ಇನ್ನೂ ರಣಕಹಳೆ ಮೊಳಗಿಸಿಲ್ಲ.
ಎಲೆಕ್ಷನ್ ಎದುರಿಸಲು ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಮೊದಲಿನ ಜೋಷ್ ನಲ್ಲಿಯೇ ಇದ್ದರೂ ನಾಯಕರ ಮಾತ್ರ ಯಾಕೋ ಕೊಂಚ ಮಂಕಾದಂತೆ ಬ್ರಾಸವಾಗುತ್ತಿದೆ.
ಹೌದು..!! ಎಲ್ಲರಿಗೂ ಗೊತ್ತಿರುವಂತೆ ಚುನಾವಣೆ ಎಂದರೇ ಬಿಜೆಪಿ ಒಂದು ವರ್ಷದ ಮೊದಲಿನಿಂದಲೇ ತಯಾರಿ ಆರಂಭಿಸುತ್ತದೆ. ತಳಮಟ್ಟದಿಂದ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಕೇಸರಿ ಪಡೆ ಘರ್ಜಿಸಲು ಆರಂಭಿಸುತ್ತದೆ. ಮಾಧ್ಯಮಗಳಲ್ಲಿ ಕೇಸರಿ ಕಲಿಗಳು ಗುಡುಗು ಸಿಡಿಲಿನ ಮಾತಿನ ದಾಳಿ ನಡೆಸುತ್ತಾರೆ.
ಆದ್ರೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದರೂ ಬಿಜೆಪಿ ಕಡೆಯಿಂದ ಇನ್ನೂ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.

ಇದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಚಾರ ಆರೋಪಗಳೇ ಪ್ರಮುಖ ಕಾರಣ ಅಂತಾ ರಾಜಕೀಯ ಪಂಡಿತರು ಅಂದಾಜಿಸುತ್ತಿದ್ದಾರೆ.
ಯಾಕಂದರೆ ವಿಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಸಿಕ್ಕ ಸಿಕ್ಕಲ್ಲಿ ಭ್ರಷ್ಟಚಾರದ ಆರೋಪ ಮಾಡುತ್ತಿದೆ.
ಕೊರೊನಾ ಸೋಂಕು ಲಾಕ್ ಡೌನ್ ನಿರ್ವಹಣೆಯಲ್ಲಿ ಭ್ರಷ್ಟಾಚಾರದಿಂದ ಮೊನ್ನೆಯ ಗುತ್ತಿಗೆದಾರರ 40 ಪರ್ಸೆಂಟ್ ಆರೋಪದವರೆಗೂ ಕಾಂಗ್ರೆಸ್ ಬಿಜೆಪಿ ವಿರುದ್ಧ ಮುಗಿಬೀಳುತ್ತಿದೆ.
ಜೊತೆಗೆ ಜನಸಮುದಾಯಕ್ಕೂ ಈ ವಿಷಯಗಳನ್ನು ತಲುಪಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ.
ಇದಕ್ಕೆ ಸರಿಯಾದ ಟಕ್ಕರ್ ನೀಡಲು ಬಿಜೆಪಿ ಇನ್ನೂ ಸರಿಯಾದ ಅಸ್ತ್ರವನ್ನು ಹುಡುಕುವ ಪ್ರಯತ್ನದಲ್ಲಿಯೇ ಇದೆ.
ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಲು ಬಿಜೆಪಿ ತಯಾರಿ ನಡೆಸುತ್ತಿದೆ ಎಂದು ಮೂಲಗಳು ಹೇಳುತ್ತಿವೆ. ಆದ್ರೆ ಅದು ಯಾವ ಮಟ್ಟಿಗೆ ಫಲಿಸುತ್ತದೆ ಅನ್ನೋದು ಯಕ್ಷಪ್ರಶ್ನೆಯಾಗಿದೆ.
ಯಾಕಂದರೇ ರಾಜ್ಯ ಬಿಜೆಪಿ ನಾಯಕರು ಈ ಹಿಂದೆ ಎದುರಿಸಿದ್ದ ಚುನಾವಣೆಗಳನ್ನು ಒಂದು ಬಾರಿ ಅವಲೋಕಿಸಿದಾಗ ಬಹುತೇಕ ವಿರೋಧ ಪಕ್ಷವಾಗಿಯೇ ಚುನಾವಣಾ ಕಣದಲ್ಲಿ ಅಬ್ಬರಿಸಿದೆ.
ಅದರಲ್ಲೂ ಬಿಜೆಪಿಯ ಮಾಸ್ ಲೀಡರ್ ಬಿ.ಎಸ್.ಯಡಿಯೂರಪ್ಪ ಮುಂದಾಳತ್ವದಲ್ಲಿ ಕೇಸರಿ ಪಡೆ ಎಲೆಕ್ಷನ್ ಅಖಾಡಕ್ಕೆ ಧುಮುಕುತ್ತಿತ್ತು.

ಆದ್ರೆ ಈ ಬಾರಿ ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸೋದು ಅನ್ನೋ ಪ್ರಶ್ನೆ ರಾಜ್ಯ ಬಿಜೆಪಿ ನಾಯಕರಲ್ಲಿ ಮೂಡಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವು ನಾಯಕರು ಬೊಮ್ಮಾಯಿ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಅಂತಾ ಬಹಿರಂಗವಾಗಿ ಸಾಕಷ್ಟು ಬಾರಿ ಹೇಳಿದ್ದಾರೆ.
ಆದ್ರೆ ಬೊಮ್ಮಾಯಿ ಮೇಲೆ ಪಕ್ಷದ ನಾಯಕರಲ್ಲಿಯೇ ಅಷ್ಟೊಂದು ವಿಶ್ವಾಸವಿಲ್ಲ. ಮುಖ್ಯವಾಗಿ ಹೈಕಮಾಂಡ್ ಕೂಡ ಅವರನ್ನೇ ಮುಂದಿನ ಸಿಎಂ ಅಂತಾ ಘೋಷಿಸಿ ಚುನಾವಣೆ ಎದುರಿಸುವ ಸ್ಥಿತಿಯಲ್ಲೂ ಇಲ್ಲ. ಇದು ಬಿಜೆಪಿಗೆ ಹಿನ್ನಡೆಯಾಗುತ್ತಿದೆ.
ಮತ್ತೊಂದು ಕಡೆ ಬಿ.ಎಸ್.ಯಡಿಯೂರಪ್ಪಗೆ ರಾಷ್ಟ್ರಮಟ್ಟದ ಸ್ಥಾನಮಾನ ನೀಡಿದ ಬಳಿಕ ರಾಜ್ಯ ಬಿಜೆಪಿಗೆ ಜೋರಾಗಿ ಉಸಿರಾಡುತ್ತಿದ್ದರೂ ಅದು ಕೇವಲ ಒಂದು ಭಾಗದ ನಾಯಕರಿಗೆ ಮಾತ್ರ ಸೀಮಿತವಾಗಿದೆ.
ಮತ್ತೊಮ್ಮೆ ಬಿಎಸ್ ವೈ ಮನೆ ಬಾಗಿಲು ತಟ್ಟಲು ರಾಜಾಹುಲಿ ವಿರೋಧಿ ಬಣಕ್ಕೆ ಸುತಾರಾಂ ಇಷ್ಟವಿಲ್ಲ.
ಅದರಲ್ಲೂ ಬಿಎಸ್ ವೈ ಹಿಂದೆ ಹೋದರೇ ಮುಂದೆ ಬಿ.ವೈ ವಿಜಯೇಂದ್ರ ಮಾತು ಕೇಳಬೇಕಾಗುತ್ತದೆ ಎಂಬ ಭಾವನೆ ಸಾಕಷ್ಟು ನಾಯಕರಲ್ಲಿದೆ.

ಇದಷ್ಟೇ ಅಲ್ಲದೇ ಬಿಜೆಪಿಯಲ್ಲಿ ಸದ್ಯ ಮೂಲ ಮತ್ತು ವಲಸೆ ಎಂಬ ನಾಯಕರು ಹುಟ್ಟಿಕೊಂಡಿದ್ದಾರೆ.
ಬಿಜೆಪಿಗೆ ವಲಸೆ ಬಂದವರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಮೂಲ ಬಿಜೆಪಿಗರು ಈಗಾಗಲೇ ಪಕ್ಷದ ವೇದಿಕೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಈ ಎಲ್ಲಾ ಕಾರಣಗಳಿಂದ ರಾಜ್ಯ ಬಿಜೆಪಿ ಜೋಷ್ ಕಳೆದುಕೊಂಡಿದೆ ಅಂತಾ ಹೇಳಬಹುದು.
ಆದ್ರೆ ಪಕ್ಷಕ್ಕಿರುವ ಕಾರ್ಯಕರ್ತರ ಬಲದಿಂದ ಯಾವುದೇ ಕ್ಷಣದಲ್ಲಾದ್ರೂ ಕೇಸರಿ ಘರ್ಜಿಸಲು ಸಾಮರ್ಥ್ಯವನ್ನು ಹೊಂದಿದೆ.