ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಜೋರಾಗಿದ್ದು, ರಾಜ್ಯವೂ ಇದಕ್ಕೆ ಹೊರತಾಗಿಲ್ಲ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಂತ್ರ- ಪ್ರತಿತಂತ್ರ ಹೆಣೆಯುತ್ತಿವೆ.
ಈ ಹಿನ್ನೆಲೆಯಲ್ಲಿ ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ ನಡೆಸಿದ್ದು, ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತದೆ ಎಂದು ಹೇಳಿದೆ.
ರಾಜ್ಯದಲ್ಲಿ ಇಂದೇ ಚುನಾವಣೆ ನಡೆದರೆ, ಕರ್ನಾಟಕದಲ್ಲಿ ಬಿಜೆಪಿಗೆ 16, ಕಾಂಗ್ರೆಸ್ ಗೆ 10 ಹಾಗೂ ಜೆಡಿಎಸ್ಗೆ 2 ಸ್ಥಾನ ಬರಲಿವೆ ಎಂದು ಸಮೀಕ್ಷೆ ಹೇಳಿದೆ.
ಜೆಡಿಎಸ್ ಎನ್ಡಿಎ ಕೂಟಕ್ಕೆ ಸೇರ್ಪಡೆ ಆಗಿರುವ ಕಾರಣ ಎನ್ಡಿಗೆ 18 ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟಕ್ಕೆ ಕೇವಲ 10 ಸ್ಥಾನ ಸಿಗಬಹುದು ಎಂದು ಸಮೀಕ್ಷೆ ತಿಳಿಸಿದೆ. ಶೇಕಡಾವಾರು ಮತ ನೋಡಿದರೆ ಬಿಜೆಪಿಗೆ ಶೇ.44, ಕಾಂಗ್ರೆಸ್ಗೆ ಶೇ.40, ಜೆಡಿಎಸ್ಗೆ ಶೇ.11 ಹಾಗೂ ಇನ್ನಿತರರಿಗೆ ಶೇ. 5ರಷ್ಟು ಮತಗಳು ಬರಲಿವೆ. ಎನ್ಡಿಎ ಕೂಟ ಲೆಕ್ಕಕ್ಕೆ ತೆಗೆದುಕೊಂಡಾಗ ಬಿಜೆಪಿ-ಜೆಡಿಎಸ್ ಒಟ್ಟಾರೆ ಶೇ.55 ಮತ ಪಡೆಯಲಿವೆ ಎಂದು ಸಮೀಕ್ಷೆ ತಿಳಿಸಿದೆ. ಸದ್ಯ ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಬ್ಬ ಸಂಸದರನ್ನು ಹೊಂದಿವೆ. ಇನ್ನೊಬ್ಬರು ಪಕ್ಷೇತರ ಸಂಸದರಿದ್ದಾರೆ.