Karnataka Rajyotsava | ನಾಡ ಧ್ವಜದ ಉಗಮ
ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯ ಸಜ್ಜಾಗಿದೆ. ಇದು ಕನ್ನಡಿಗರ ಹಬ್ಬ. ಜಾತಿ, ಧರ್ಮ ಬೇಧವಿಲ್ಲದೇ ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಹೆಮ್ಮೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ.
ನವೆಂಬರ್ ತಿಂಗಳು ಪೂರ್ತಿ ರಾಜ್ಯ ಕನ್ನಡ ಮಯವಾಗಿರುತ್ತದೆ. ಆಟೋ ರಿಕ್ಷಾ ಮತ್ತು ಇತರೆ ವಾಹನಗಳ ಮೇಲೆ ಕನ್ನಡದ ಬಾವುಟ ರಾರಾಜಿಸುತ್ತಿರುತ್ತದೆ.
ಅಂದಹಾಗೆ ಕರ್ನಾಟಕಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯೋತ್ಸವ ದಿನದಂದು ಕರ್ನಾಟಕ ರಾಜ್ಯಾದ್ಯ೦ತ ಹಾರಾಡುತ್ತವೆ. 1965 ರಲ್ಲಿ ಅರಿಶಿಣ ಮತ್ತು ಕೆಂಪು ಬಣ್ಣದ ನಾಡಧ್ವಜವನ್ನು ಶ್ರೀ ಎಂ.ರಾಮಮೂರ್ತಿಯವರು ಪ್ರಾರಂಭಿಸಿದ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಹುಟ್ಟು ಹಾಕಲಾಯಿತು. ಇದೇ ಧ್ವಜವನ್ನು ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮಾವೇಶಗಳಲ್ಲಿ, ಕನ್ನಡ ಸಂಸ್ಕೃತಿ ಸಮ್ಮೇಳನಗಳಲ್ಲಿ ಹಾರಿಸಿದರು ಕೂಡ. ಮೂಲತಃ ಹಳದಿ ಬಣ್ಣವು ಕನ್ನಡಾಂಬೇಯ ಆರಿಶಿನ ಮತ್ತು ಕುಂಕುಮವನ್ನು ಸೂಚಿಸುತ್ತದೆ ಹಾಗೂ ಹಳದಿ ಬಣ್ಣವು ಶಾಂತಿ, ಸೌಹಾರ್ದತೆ ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸಂದೇಶ ನೀಡುತ್ತದೆ. ಕನ್ನಡಿಗರೂ ಶಾಂತಿಗೆ ಬದ್ಧ, ಯುದ್ಧಕ್ಕೂ ಸಿದ್ಧ ಎಂಬ ಸಂದೇಶವನ್ನು ನೀಡುತ್ತದೆ .

ಆರಂಭದಲ್ಲಿ ಕನ್ನಡ ಬಾವುಟ ಸಿದ್ಧಗೊಂಡಾಗ ಬಾವುಟದ ಮಧ್ಯೆ ಕರ್ನಾಟಕದ ಭೂಪಟ ಮತ್ತು ಅದರ ನಡುವಿನಲ್ಲಿ ಏಳು ಕವಲುಗಳುಳ್ಳ ತೆನೆಯ ಚಿತ್ರವಿತ್ತು. ಮುದ್ರಿಸಲು ಸ್ವಲ್ಪ ಕಷ್ಟವಾಗುತ್ತಿದ್ದರಿಂದ ಅದನ್ನು ತೆಗೆದು ಕೇವಲ ಹಳದಿ ಮತ್ತು ಕೆಂಪು ಬಣ್ಣವನ್ನು ಮಾತ್ರ ಉಳಿಸಿಕೊಳ್ಳಲಾಯಿತು.
ಕರ್ನಾಟಕದಲ್ಲಿ ರಾಷ್ಟ್ರಧ್ವಜಕ್ಕೆ ಇರುವಷ್ಟು ಮಾನ್ಯತೆ ಕನ್ನಡ ಧ್ವಜಕ್ಕೂ ಇದೆ. ಗೋಕಾಕ್ ಚಳವಳಿಯಲ್ಲಿ ಕನ್ನಡಿಗರ ಐಕ್ಯತೆಯ ಸಂಕೇತವಾಗಿ ಈ ಧ್ವಜವನ್ನು ಬಳಸಲಾಗಿತ್ತು. 1998 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿತ್ತು. ಆದ್ರೆ ಅದಕ್ಕೆ ಕಾನೂನು ಅಡಚಣೆ ಇದ್ದರಿಂದ ಅದು ಸಾಧ್ಯವಾಗಿರಲಿಲ್ಲ.
ಅಂದಹಾಗೆ ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ರಾಜ್ಯೋತ್ಸವದಂದು ಸರ್ಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜವನ್ನು ಹಾರಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದರು. ಆದ್ರೆ ಇದನ್ನ ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿದ ಕಾರಣ ಆದೇಶ ಹಿಂಪಡೆಯಬೇಕಾಗಿತ್ತು.
ಈಗಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆಗಿನ ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಬೇಕು ಎಂದು 9 ಮಂದಿಯ ಸಮಿತಿಯನ್ನು ರಚಿಸಿದ್ದು, ಚರ್ಚೆಗೆ ಗ್ರಾಸವಾಗಿತ್ತು.