Karnataka politics | ಕಾಂಗ್ರೆಸ್ ಸೇರುವ ಬಗ್ಗೆ ಕೆ.ಸಿ.ನಾರಾಯಣಗೌಡ ಸ್ಪಷ್ಟನೆ
ಶಿವಮೊಗ್ಗ : ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ವಲಸಿಗರು ಮತ್ತೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಅನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಸುತ್ತಾಡುತ್ತಿದೆ.
ಮುಖ್ಯವಾಗಿ ಕಾಂಗ್ರೆಸ್ ನಾಯಕರು ಪದೇ ಪದೇ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನೋ ಹೇಳಿಕೆ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಇನ್ನು ವಲಸಿಗರು ಮತ್ತೆ ಕಾಂಗ್ರೆಸ್ ಸೇರಲಿಲ್ಲ ಅನ್ನುವುದರ ಬಗ್ಗೆ ಸಚಿವ ಕೆ.ಸಿ.ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದು, ನಾವು ಮತ್ತೆ ಕಾಂಗ್ರೆಸ್ಗೆ ಹೋಗಲ್ಲ, ನಾವು ಯಾರೂ ಅವರ ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸಿ.ನಾರಾಯಣಗೌಡ, ನಾವು ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಪಕ್ಷ ಸೇರೋದಿಲ್ಲ. ಯಡಿಯೂರಪ್ಪ ಅವರನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ.
ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರಿಗೆ ಮಾಡಲು ಕೆಲಸ ಇಲ್ಲ. ಅವರು ಏನೇನೋ ಹೇಳ್ತಾರೆ ಅಷ್ಟೇ.. ನಮಗೆ ಮಾಡೋಕೆ ಬಹಳ ಕೆಲಸ ಇದೆ ಎಂದು ಟಾಂಗ್ ನೀಡಿದರು.
ಇದೇ ವೇಳೆ ಮುಂದೆಯೂ ಬಿಜೆಪಿ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ನಾರಾಯಣ ಗೌಡ, ನಾವ್ಯಾರು 17 ಜನರೂ ಕೂಡ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು. ಹಾಗೇ ಮಂಡ್ಯದಲ್ಲಿ 3 ರಿಂದ 4 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.