ಮೈಸೂರು : ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಎಲ್ಲಾ ಕ್ಷೇತ್ರಗಳಿಗೆ ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಹಣ ನೀಡಲಾಗಿದೆ. ಅಲ್ಲದೆ ಪಡಿತರ ವಸ್ತುಗಳ ಜೊತೆಗೆ ಅಗತ್ಯ ವಸ್ತುಗಳನ್ನು ಕೊಡಲಾಗಿದೆ. ಲಾಕ್ ಡೌನ್ ಸಮಯದಲ್ಲಷ್ಟೇ ಅಲ್ಲ, ಲಾಕ್ ಡೌನ್ ಮುಗಿದ ನಂತರವೂ ಮೋದಿ ಸರ್ಕಾರ ಜನರ ಜೊತೆಗಿದೆ ಎಂದರು.
ಆತ್ಮ ನಿರ್ಭರ ಯೋಜನೆಯ ಬಗ್ಗೆ ಕೆಲವರು ರಾಜಕೀಯ ಪ್ರೇರಿತರಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದ ಪ್ರತಾಪ್ ಸಿಂಹ, ಕೊರೊನಾ ಸಂದರ್ಭದಲ್ಲಿ ರಾಜಕೀಯ ಬಿಟ್ಟು ಜನರ ಒಳಿತಿಗಾಗಿ ಸಲಹೆ ನೀಡಲಿ ಎಂದು ವಿಪಕ್ಷಗಳ ವಿರುದ್ಧ ಗರಂ ಆದರು.
ಇನ್ನು ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡಗಳ ಸೌಲಭ್ಯ ನೀಡಲು ಅಧಿಕಾರಿಗಳು ಗೊಂದಲ ಉಂಟು ಮಾಡಿ, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರಿಗೆ ಗೊಂದಲ ಪರಿಹರಿಸುವಂತೆ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.








