ಕೇರಳ ವಿಮಾನ ಅಪಘಾತ – ಹೆಣ್ಣು ಮಗುವೊಂದು ಏಕಾಂಗಿಯಾಗಿ ಪತ್ತೆ
ಕೋಝಿಕೋಡ್, ಅಗಸ್ಟ್ 8: ಶುಕ್ರವಾರ ರಾತ್ರಿ ನಡೆದ ಕೇರಳದ ಕೋಝಿಕೋಡ್ ವಿಮಾನ ಅಪಘಾತದಲ್ಲಿ ಏಕಾಂಗಿಯಾಗಿ ಹೆಣ್ಣು ಮಗುವೊಂದು ಪತ್ತೆಯಾಗಿದೆ. ಸದ್ಯ ಆ ಮಗು ಕೇರಳ ಪೊಲೀಸರ ವಶದಲ್ಲಿದ್ದು ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಮಗುವಿನ ಬಗ್ಗೆ ಮಾಹಿತಿ ಉಳ್ಳವರು ದೂರವಾಣಿ ಸಂಖ್ಯೆ 948769169 ಸಂಪರ್ಕಿಸುವಂತೆ ಕೇರಳದ ಪೊಲೀಸರು ಮನವಿ ಮಾಡಿದ್ದಾರೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ರನ್ ವೇನಲ್ಲಿ ಇಳಿಯುವ ಯತ್ನದಲ್ಲಿದ್ದಾಗ ಪೈಲಟ್ ನಿಯಂತ್ರಣ ತಪ್ಪಿ ಮುಂದಕ್ಕೆ ಜಾರಿ 35 ಅಡಿ ಆಳದ ಕಮರಿಗೆ ಉರುಳಿ ಬಿದ್ದಿದೆ. ಹೀಗೆ ಕಮರಿಗೆ ಉರುಳಿದ ವಿಮಾನವು ಇಬ್ಭಾಗವಾಗಿದ್ದು, ಮುಂಭಾಗದ ಅರ್ಧ ಭಾಗವು ಹಾನಿಗೊಳಗಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದು, 123 ಮಂದಿ ಗಾಯಗೊಂಡಿದ್ದಾರೆ ಮತ್ತು 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹತ್ತು ಮಕ್ಕಳು, ಇಬ್ಬರು ಪೈಲಟ್‌ಗಳು ಮತ್ತು ಐದು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 184 ಪ್ರಯಾಣಿಕರು ವಿಮಾನದಲ್ಲಿದ್ದರು.








