ಭಾರತೀಯ ಕ್ರಿಕೆಟ್ ನ ಆಧುನಿಕ ಏಕಲವ್ಯ ಖ್ರಿವಿಟ್ಸೊ ಕೆನ್ಸೆ..!
ಖ್ರಿವಿಟ್ಸೊ ಕೆನ್ಸೆ… ಈ ಹೆಸರು ಸ್ವಲ್ಪ ವಿಚಿತ್ರ.. ಹಾಗಂತ ಈ ಹೆಸರೇನು ವಿದೇಶಿಯವನದಲ್ಲ. ಭಾರತದ ನಾಗಾಲ್ಯಾಂಡ್‍ನ 16ರ ಹರೆಯದ ಹುಡುಗನದ್ದು.
ಅಷ್ಟಕ್ಕೂ ಈ ಹುಡುಗನ ಸುದ್ದಿ ಯಾಕೆ ಅಂತಿರಾ… ವಿಷ್ಯ ಇರೋದೇ ಇಲ್ಲಿ. ಈ ಹುಡುಗ ಆಧುನಿಕ ಏಕಲವ್ಯ. ಗುರುವಿನ ಮಾರ್ಗದರ್ಶನವಿಲ್ಲ. ಮಹಾಭಾರತದ ಏಕಲವ್ಯನಂತೆ ದ್ರೋಣಾಚಾರ್ಯರ ಪ್ರತಿಮೆ ಇಟ್ಟುಕೊಂಡು ಕಲಿತವನಲ್ಲ. ಬದಲಾಗಿ ಟಿವವಿ ಪರದೆಯ ಮೇಲೆ ನೋಡಿಕೊಂಡು ಕಲಿತನವನ ಯಶೋಗಾಥೆ ಇದು.
ಹೌದು, ಖ್ರಿವಿಟ್ರೋ ಕೆನ್ಸೆ.. ಯುವ ಕ್ರಿಕೆಟಿಗ. 16ರ ಹರೆಯದ ನಾಗಾಲ್ಯಾಂಡ್‍ನ ದಿಮಾಪುರದ ಹುಡುಗ. ಟಿವಿ ಪರದೆಯ ಮೇಲೆ ಶೇನ್ ವಾರ್ನ್ ಅವರ ಬೌಲಿಂಗ್ ಶೈಲಿಯನ್ನು ನೋಡಿಕೊಂಡು ಕಲಿತ ಹುಡುಗ ಈಗ ಐಪಿಎಲ್ ಅಂಗಣಕ್ಕೆ ಕಾಲಿಡಲು ಸನ್ನದ್ದನಾಗುತ್ತಿದ್ದಾನೆ.
ದಿಮಾಪುರದ ಕಾರ್ಪೆಂಟರ್ ಮಗನಾಗಿರುವ ಖ್ರಿವಿಟ್ರೋ ಕೆನ್ಸೆ ಎಂಟು ಮಕ್ಕಳ ಪೈಕಿ ಐದನೇಯವ.
ಬಾಲ್ಯದಲ್ಲೇ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ. ಆದ್ರೆ ಕ್ರಿಕೆಟ್ ಕಲಿಯಲು ಅಕಾಡೆಮಿಗೆ ಹೋಗಲು ಮನೆಯಲ್ಲಿ ಆರ್ಥಿಕ ಸಮಸ್ಯೆ. ಆದ್ರೂ ಮನೆಯಲ್ಲೇ ಶೇನ್ ವಾರ್ನ್ ಅವರ ಎಸೆತಗಳನ್ನು ನೋಡಿಕೊಂಡು ಅವರಂತೆ ಬೌಲಿಂಗ್ ಮಾಡುವುದನ್ನು ಕಲಿಯಲು ಯಾವುದೇ ರೀತಿಯಲ್ಲೂ ಬಡತನ ಅಡ್ಡಿಯಾಗಲಿಲ್ಲ.
ಆರಂಭದಲ್ಲೇ ಖ್ರಿವಿಟ್ರೋ ಕೆನ್ಸೆ ಅವರು ಆಫ್ ಸ್ಪಿನ್ನರ್ ಅಗಿದ್ದರು. ಆದ್ರೆ ಕೈ ಬೆರಳು ನೋವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಬೌಲಿಂಗ್ ಶೈಲಿಯನ್ನೇ ಬದಲಾವಣೆ ಮಾಡಿಕೊಂಡ ಕೆನ್ಸೆ. ಆಫ್ ಸ್ಪಿನ್ ಬದಲು ಲೆಗ್ ಸ್ಪಿನ್ನರ್ ಆಗಿ ಮಾರ್ಪಡು ಮಾಡಿಕೊಂಡ ಖ್ರಿವಿಟ್ಸೊ ನಂತರ ಹಿಂತಿರುಗಿ ನೋಡಲೇ ಇಲ್ಲ.
ಶೇನ್ ವಾರ್ನ್ ಬೌಲಿಂಗ್ ಶೈಲಿ ನನಗೆ ತುಂಬಾ ಇಷ್ಟ. ಅವರಂತೆ ತಾನೂ ಸ್ಪಿನ್ನರ್ ಆಗಬೇಕು ಅಂತ ಕನಸು ಕಾಣುತ್ತಿದೆ. ಆದ್ರೆ ನನಗೆ ಗುರು ಇಲ್ಲ. ನಾನೇ ಕಲಿತುಕೊಂಡೆ. ನಂತರದ ದಿನಗಳಲ್ಲಿ ನನಗೆ ಒಬ್ಬರು ಸಿಕ್ಕರು. ಅವರ ಸಹಾಯ, ಮಾರ್ಗದರ್ಶನದಿಂದ ಇವತ್ತು ಈ ಮಟ್ಟಕ್ಕೆ ಬರಲು ಕಾರಣವಾಯ್ತು ಅಂತ ಖ್ರಿವಿಟ್ಸೊ ಹೇಳುತ್ತಾನೆ.
ಸ್ಥಳೀಯ ಕೋಚ್ ಒಬ್ಬರ ಸಹಾಯದಿಂದ ನಾಗಾಲ್ಯಾಂಡ್ ನ 16 ವಯೊಮಿತಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿತ್ತು. 2018-19ರ ವಿಜಯ ಮರ್ಚೆಂಟ್
ಟೂರ್ನಿಯಲ್ಲಿ ಉತ್ತರ ಪ್ರದೇಶದ ವಿರುದ್ಧ ಮೊದಲ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿತ್ತು. ಆ ಪಂದ್ಯದಲ್ಲಿ ನಾನು ಐದು ವಿಕೆಟ್ ಪಡೆದುಕೊಂಡೆ ಅಂತ ಹೇಳಿಕೊಳ್ಳುತ್ತಾನೆ ಕೆನ್ಸೆ.
ಕಳೆದ ವರ್ಷ ನಾಗಲ್ಯಾಂಡ್ ನ ಹಿರಿಯರ ತಂಡದ ನಾಯಕ ರೊಂಗ್ಸೆನ್ ಜೋನಾಥನ್ ಮತ್ತು ಉಪನಾಯಕ ಹೊಕೇಟೊ ಝೊಮೊಮಿ ಅವರು ಕೆನ್ಸೆ ಗೆ ತರಬೇತಿ ಶಿಬಿರಕ್ಕೆ ಆಹ್ವಾನ ನೀಡಿದ್ರು. ಅಲ್ಲಿ ಕೋಚ್ ಕಾನ್ವಾಲ್ಜಿತ್ ಸಿಂಗ್ ಅವರ ಗಮನ ಸೆಳೆದ ಕೆನ್ಸೆ ಗೆ ಮತ್ತೊಂದು ವೇದಿಕೆ ಸಿಕ್ಕಿತ್ತು.
ಕೆನ್ಸೆ ಯ ಪ್ರತಿಭೆಯನ್ನು ಗುರುತಿಸಿದ್ದ ಕೋಚ್ ಕಾನ್ವಾಲ್ಜಿತ್ ಸಿಂಗ್‍ಗೆ ಆತನ ಹೆಸರನ್ನು ಕರೆಯುವುದೇ ದೊಡ್ಡ ಸಮಸ್ಯೆಯಾಗಿತ್ತು. ಹೇಗೆ ಕರೆಯಬೇಕು ಎಂಬುದೇ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಕೋಚ್ ಕ್ರೀವ್ ಅಂತ ಕರೆಯುತ್ತಿದ್ದರು.
ಬಳಿಕ ನಾಗಲ್ಯಾಂಡ್ ಹಿರಿಯರ ತಂಡದಲ್ಲಿ ಕಾಣಿಸಿಕೊಂಡಡ ಖ್ರಿವಿಟ್ಸೊ, ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯಲ್ಲೂ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದ. ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ಏಳು ವಿಕೆಟ್ ಉರುಳಿಸಿದ್ದ ಖ್ರಿವಿಟ್ಸೊ ಮಿಜೋರಾಂ ವಿರುದ್ಧ 16ಕ್ಕೆ ಮೂರು ವಿಕೆಟ್ ಕಬಳಿಸಿದ್ದ.
ಗೂಗ್ಲಿ ಎಸೆತಗಳನ್ನು ಎಸೆಯುವ ಖ್ರಿವಿಟ್ಸೊ ಗೆ ಅಫಘಾನಿಸ್ತಾನದ ರಶೀದ್ ಖಾನ್ ಅವರೇ ಹೀರೋ. ಹೀಗಾಗಿಯೇ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ದೊಡ್ಡ ಅಭಿಮಾನಿಯಾಗಿದ್ದಾನೆ ಖ್ರಿವಿಟ್ಸೊ.
ಸದ್ಯ ಖ್ರಿವಿಟ್ಸೊ ಕೆನ್ಸೆ ಚೆನ್ನೈ ನಲ್ಲಿ ಕ್ವಾರೈಂಟನ್ ನಲ್ಲಿದ್ದಾನೆ. ಫೆಬ್ರವರಿ 18ರಿಂದ ನಡೆಯಲಿರುವ ವಿಜಯ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ರೆಡಿಯಾಗಿದ್ದಾನೆ.
ಈಗಾಗಲೇ ಖ್ರಿವಿಟ್ಸೊ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡದ ಕಣ್ಣಿಗೆ ಬಿದ್ದಿದ್ದಾನೆ. ಹಾಗೇ ಐಪಿಎಲ್ ಬಿಡ್ಡಿಂಗ್ ಲಿಸ್ಟ್ ನಲ್ಲೂ ಇದ್ದಾನೆ. 20 ಲಕ್ಷ ಮೂಲ ಬೆಲೆಯಾಗಿದೆ. ಯಾವ ತಂಡ ಖರೀದಿ ಮಾಡುತ್ತಾರೋ ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಪ್ರತಿಭೆಗೆ ಯಾವ ಹಂಗು ಇಲ್ಲ. ಅವಕಾಶ ಸಿಗಬೇಕು ಅಷ್ಟೇ.. ಹಾಗೇ ಗುರುವಿನ ಆಶ್ರಯವಿಲ್ಲದೆ ಲೆಗ್ ಸ್ಪಿನ್ನರ್ ಆಗಿ ರೂಪುಗೊಂಡಿರುವ ಖ್ರಿವಿಟ್ಸೊ ಭವಿಷ್ಯದಲ್ಲಿ ಟೀಮ್ ಇಂಡಿಯಾ ಆಟಗಾರನಾಗಬಹುದೇನೋ.. ಯಾರಿಗೆ ಗೊತ್ತು..? ಯಾವುದಕ್ಕೂ ಕಾಲವೇ ನಿರ್ಧರಿಸಲಿದೆ.








