ಬೆಂಗಳೂರು : ನಾಳೆ ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬ. ಕೊರೊನಾ ವೈರಸ್ ಕಾರಣದಿಂದ ಈ ವರ್ಷದ ಹುಟ್ಟುಹಬ್ಬವನ್ನು ಗಣೇಶ್ ಅವರು ಸರಳವಾಗಿ ಆಚರಿಸಲು ತೀರ್ಮಾನ ಮಾಡಿದ್ದಾರೆ. ಇದರ ಮಧ್ಯೆ ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್, ಗಣಪನ ಹುಟ್ಟುಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ವಿಶ್ ಮಾಡಿದ್ದಾರೆ.
ಹೌದು..! ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ಕ್ಕೆ ಇದೆ. ಈ ದಿನಾಂಕವನ್ನು ಗೊಂದಲ ಮಾಡಿಕೊಂಡ ಸುದೀಪ್ ಎರಡು ದಿನ ಮುಂಚಿತವಾಗಿಯೇ ತಮ್ಮ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ. ನಂತರ ಗಣಿ ಹುಟ್ಟುಹಬ್ಬ ಜುಲೈ 2ಕ್ಕೆ ಎಂದು ತಿಳಿದು, ಈ ವಿಶ್ ಅನ್ನು ಅಡ್ವಾನ್ಸ್ ಆಗಿ ಪರಿಗಣಿಸಿ ಎಂದು ರಿಟ್ವೀಟ್ ಮಾಡಿದ್ದಾರೆ ಸುದೀಪ್.
ಕಿಚ್ಚ ಮೊದಲ ಟ್ವೀಟ್ ನಲ್ಲಿ, ಹುಟ್ಟುಹಬ್ಬದ ಶುಭಾಶಯಗಳು ಗೆಳೆಯ, ದೇವರು ನಿನಗೆ ಆರೋಗ್ಯ ಮತ್ತು ಐಶ್ವರ್ಯ ಕೊಟ್ಟು ಕಾಪಾಡಲಿ. ಕ್ವಾರಂಟೈನ್ ಸಮಯದಲ್ಲಿ ಗಡ್ಡ ಹೊಸ ಸಿಕ್ಸ್ ಪ್ಯಾಕ್ ಆಗಲಿ. ನಿನಗೆ ದೇವರು ಹೆಚ್ಚಿನ ಶಕ್ತಿ ಮತ್ತು ಯಶಸ್ಸನ್ನು ಕೊಟ್ಟು ಆಶೀರ್ವದಿಸಲಿ. ಮಚ್ ಲವ್ ಯೂ ಚೀಯರ್ಸ್ ಎಂದು ಬರೆದು ಎರಡು ದಿನ ಮುಂಚಿತವಾಗಿಯೇ ವಿಶ್ ಮಾಡಿದ್ದರು.
ಸುದೀಪ್ ವಿಶ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ಕ್ಕೆ ಇರುವುದು ಎಂದು ಕಮೆಂಟ್ ಮಾಡಿದ್ದಾರೆ. ಇದರಿಂದ ತಕ್ಷಣ ಎಚ್ಚೆತ್ತ ಮಾಣಿಕ್ಯ, ನಾನು ತಪ್ಪು ದಿನಾಂಕವನ್ನು ಪಡೆದು ವಿಶ್ ಮಾಡಿದೆ. ಇದನ್ನು ಅಡ್ವಾನ್ಸ್ ವಿಶ್ ಎಂದು ಪರಿಗಣಿಸಿ. ಸರಳವಾಗಿ ಹುಟ್ಟುಹಬ್ಬ ಆಚರಿಸಲು ತೀರ್ಮಾನ ಮಾಡಿರುವುದು ಒಳ್ಳೆಯ ನಿರ್ಧಾರ ಎಂದು ರಿಟ್ವೀಟ್ ಮಾಡಿದ್ದಾರೆ.
ಇನ್ನು ಸುದೀಪ್ ಅವರು, ಎರಡು ದಿನ ಮುಂಚಿತವಾಗಿಯೇ ವಿಶ್ ಮಾಡಿದ್ದಕ್ಕೆ ಖುಷಿಯಾಗಿ ಟ್ವೀಟ್ ಮಾಡಿರುವ ಗಣೇಶ್, ನೀವೇ ನನಗೆ ಮೊದಲು ವಿಶ್ ಮಾಡಿದ್ದು, ನಿಮಗೆ ಧನ್ಯವಾದಗಳು ಸರ್ ಎಂದು ಬರೆದುಕೊಂಡಿದ್ದಾರೆ.