ಯಲಹಂಕದ ರೈತರ ಸಂತೆಯ ಬಳಿ ಕಿಡ್ನಾಪ್ | 3 ಗಂಟೆಯಲ್ಲೇ ಪತ್ತೆ ಹಚ್ಚಿದ ಪೊಲೀಸರು Saaksha Tv
ಬೆಂಗಳೂರು: ಅಪಹರಣಗೊಂಡ ಎಂಜಿನಿಯರ್ ಒಬ್ಬರನ್ನು 3 ಗಂಟೆಯಲ್ಲಿ ಯಲಹಂಕ ಪೊಲೀಸರು ಪತ್ತೆಹಚ್ಚಿದ್ದಾರೆ.
ಬೆಂಗಳೂರಿನ ಯಲಹಂಕದ ರೈತರ ಸಂತೆಯ ಬಳಿ ಬುಧವಾರ ಬೆಳಗ್ಗೆ 9.40ಕ್ಕೆ ಎಂಜಿನಿಯರ್ ಮಾನಸ್ ಎಂಬುವವರನ್ನು ನಂದ, ಸುನಿಲ್ ಸೇರಿದಂತೆ ಐವರು ಪಾತಕಿಗಳು ಅಪಹರಣ ಮಾಡಿದ್ದರು. ಅಪಹರಣವಾದ ಬಳಿಕ ಜೊತೆಗಿದ್ದ ಯುವತಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಯಲಹಂಕ ಪೊಲೀಸರಿಗೆ ಯುವತಿ ಮಾಹಿತಿ ನೀಡಿದ್ದಾರೆ.
ಯುವತಿ ಮಾಹಿತಿ ಆಧರಿಸಿ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಮತ್ತು ಟೀಂ ಕ್ಷಿಪ್ರ ಕಾರ್ಯಾಚರಣೆಗೆ ಇಳಿದಿದ್ದರು. ಅಪಹರಣಕ್ಕೀಡಾಗಿದ್ದ ಎಂಜಿನಿಯರ್ ಮಾನಸ್ ಅವರ ಮೊಬೈಲ್ ಗೆ ಪೊಲೀಸರು ಕರೆ ಮಾಡಿದ್ದಾರೆ. ಆದರೆ ಸ್ವಿಚ್ ಆಫ್ ಆಗಿತ್ತು. ಕೆಲವು ಸಮಯದ ನಂತರ ಮಾನಸ್ ಅವರ ಮೊಬೈಲ್ ಸ್ವಿಚ್ ಆನ್ ಆಗಿದೆ. ಇದರಿಂದ ಆರೋಪಿಗಳು ಇರುವ ಮೊಬೈಲ್ ಲೊಕೇಷನ್ ಟ್ರೇಸ್ ಆಗಿದೆ.
ಆರೋಪಿಗಳು ಯಲಹಂಕದಿಂದ ಕೋಲಾರದತ್ತ ಹೋಗುತ್ತಿರುವುದನ್ನು ತಿಳಿದು ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಐವರು ಕಿಡ್ನ್ಯಾಪರ್ಗಳನ್ನು ಅರೆಸ್ಟ್ ಮಾಡಿದ ಯಲಹಂಕ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ 30 ಲಕ್ಷ ರೂಪಾಯಿ ಒತ್ತೆ ಹಣಕ್ಕಾಗಿ ಕಿಡ್ನ್ಯಾಪ್ ಮಾಡಿದ್ದಾಗಿ ಹೇಳಿದ್ದಾರೆ.









