ಗದಗ: ಕಾಂಗ್ರೆಸ್ ಮುಖಂಡನನ್ನು ಕೊಲೆ ಮಾಡಿ ಮರಕ್ಕೆ ನೇಣು ಹಾಕಿರುವ ಭಯಾನಕ ಘಟನೆಯೊಂದು ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಹತ್ತಿರ ನಡೆದಿದೆ.
ಡೋಣಿ ಗ್ರಾಮದ ಕಾಂಗ್ರೆಸ್ ನಾಯಕ ಶರಣಪ್ಪ ಸಂದೀಗೌಡರ್ (40) ಕೊಲೆಯಾದ ವ್ಯಕ್ತಿ. ಆರೋಪಿಗಳು ಮುಖಂಡನನ್ನು ಅಟ್ಟಾಡಿಸಿ ಹೊಡೆದು, ಕಣ್ಣಿಗೆ ಖಾರದ ಪುಡಿ ಚಲ್ಲಿ, ಮರಕ್ಕೆ ಕೈ ಕಾಲು ಕಟ್ಟಿ ಕೊಲೆ ಮಾಡಿದ್ದಾರೆ. ಆ ನಂತರ ಆತನನ್ನು ಮರಕ್ಕೆ ನೇಣು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಹತ್ಯೆಯಾದ ಶರಣಪ್ಪ ಮರಳು ದಂಧೆ ನಡೆಸುತ್ತಿದ್ದ. ಆದರೆ, ಆತನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆಯಿಂದ ಡೋಣಿ ಹಾಗೂ ಡಾಂಬಳ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಸ್ಥಳದಲ್ಲಿ ಬೈಕ್ ಪತ್ತೆಯಾಗಿದ್ದು, ತನಿಖೆ ಕೈಗೊಂಡಿದ್ದಾರೆ.