ಕಳೆದ ಕೆಲವು ದಿನಗಳಿಂದಲೂ ಯಾರ ಕಣ್ಣಿಗೂ ಕಾಣದೆ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಮೃತಪಟ್ಟಿದ್ದಾರೆಂದು ಚೀನಾ ಮತ್ತು ಜಪಾನ್ ನ ಮಾಧ್ಯಮಗಳು ವರದಿ ಮಾಡಿವೆ.
ಕೆಲವು ದಿನಗಳ ಹಿಂದೆ ಕಿಮ್ ಜಾಂಗ್ ಉನ್ ಅವರು ಹೃದಯ ರಕ್ತನಾಳದ ಚಿಕಿತ್ಸೆಗೆ ಒಳಪಟ್ಟಿದ್ದು, ಅವರ ಆರೋಗ್ಯ ಪರಿಸ್ಥಿತಿ ಆಗಲೇ ತೀರಾ ಹದಗೆಟ್ಟಿತು ಎಂದು ವರದಿಯಾಗಿತ್ತು. ಆದರೆ ಇದೀಗ ಚೀನಾ ಮತ್ತು ಜಪಾನ್ ಮಾಧ್ಯಮಗಳು ಕಿಮ್ ಜಾಂಗ್ ಉನ್ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿವೆ.
ಆದರೆ ಕೊರಿಯಾದ ಸರ್ಕಾರಿ ಮಾಧ್ಯಮಗಳು ಕಿಮ್ ಮೃತ ಪಟ್ಟಿರುವ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಕೂಡಾ ನೀಡಿಲ್ಲ. ಕಿಮ್ ಸಾವಿನ ಬಗ್ಗೆ ಊಹಾಪೋಹಗಳು ಹರಡಿದ್ದು, ವೈದ್ಯರ ಎಡವಟ್ಟುವಿನಿಂದ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಕಿಮ್ ಹೃದಯಕ್ಕೆ ಸ್ಟಂಟ್ ಅಳವಡಿಸುವಾಗ, ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ವೈದ್ಯರಿಗೆ ಭಯದಿಂದ ಕೈ ನಡುಕ ಉಂಟಾದ ಕಾರಣ ಶಸ್ತ್ರಚಿಕಿತ್ಸೆಯಲ್ಲಿ ಎಡವಟ್ಟು ಸಂಭವಿಸಿ ಕಿಮ್ ಮೃತಪಟ್ಟಿದ್ದಾರೆ ಎನ್ನುವ ಸುದ್ದಿಗಳು ಹರಡಿದೆ. ಚೀನಾದ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಕಾರಣ ಚೀನಾದಿಂದ ವೈದ್ಯರ ತಂಡವು ಪ್ಯೊಂಗ್ಯಾಂಗ್ ಗೆ ತೆರಳಿತ್ತು ಎನ್ನಲಾಗಿದೆ.
ಕಿಮ್ ಜಾಂಗ್ ಉನ್ ಚೈನ್ ಸ್ಮೋಕರ್ ಕೂಡಾ ಆಗಿದ್ದರು ಎನ್ನಲಾಗಿದ್ದು, ಅವರ ಕುಟುಂಬದಲ್ಲಿ ಹಲವರು ಹೃದಯ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಚೀನಾದಿಂದ ವೈದ್ಯರ ತಂಡವು ಪ್ಯೊಂಗ್ಯಾಂಗ್ ತೆರಳಿದ್ದ ವಿಚಾರ ಬಹಿರಂಗ ಪಡಿಸಿಲ್ಲವಾದರೂ, ಕೆಲ ಮಾದ್ಯಮಗಳು ಈ ಬಗ್ಗೆ ವರದಿ ಮಾಡಿದೆ. ಅಲ್ಲದೆ ಕಿಮ್ ಜಾಂಗ್ ಉನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲಿಯವರೆಗೆ ದೊರಕಿಲ್ಲದಿರುವುದು ಅವರು ಮೃತನಾಗಿರಬಹುದು ಎನ್ನುವ ಸಂಶಯವನ್ನು ಪುಷ್ಟಿಕರಿಸಿದೆ.