ಐಪಿಎಲ್ ನ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಬೆಂಗಳೂರು ತಂಡ ಭರ್ಜರಿಯಾಗಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಿಂಚಿದ್ದು ಕೆಲವು ದಾಖಲೆಗಳನ್ನು ಮಾಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ್ದ ಆರ್ ಸಿಪಿ ಪರ ವಿರಾಟ್ ಕೊಹ್ಲಿ ರನ್ಗಳ ಮಳೆ ಸುರಿಸಿದರು. ಕೇವಲ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಸಹಿತ 92 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಕೊಹ್ಲಿಗೆ 2 ಜೀವದಾನ ಸಿಕ್ಕವು. ಈ ಪಂದ್ಯದ ಮೂಲ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 1 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಅತಿ ಹೆಚ್ಚು ಎದುರಾಳಿ ತಂಡಗಳ ವಿರುದ್ಧ 1 ಸಾವಿರಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಕೊಹ್ಲಿ ಮಾಡಿದ್ದಾರೆ.
ಪಂಜಾಬ್ ಕಿಂಗ್ಸ್ ಹೊರತುಪಡಿಸಿದರೆ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಡೆಲ್ಲಿ ವಿರುದ್ಧ 1030 ರನ್, ಪಂಜಾಬ್ ವಿರುದ್ಧ 1020 ರನ್ ಮತ್ತು ಸಿಎಸ್ಕೆ ವಿರುದ್ಧ 1006 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ (ದೆಹಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್) ಮತ್ತು ಡೇವಿಡ್ ವಾರ್ನರ್ (ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್) ತಲಾ 2 ಎದುರಾಳಿ ತಂಡಗಳ ವಿರುದ್ಧ 1 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಇಲ್ಲಿಯವರೆಗೂ ಪ್ರಸಕ್ತ ಐಪಿಎಲ್ ನಲ್ಲಿ ಕೊಹ್ಲಿ 634 ರನ್ ಗಳಿಸಿದ್ದಾರೆ. ಹೆಚ್ಚಿನ ಸೀಸನ್ಗಳಲ್ಲಿ ಜಂಟಿಯಾಗಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ಕೂಡ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ಐಪಿಎಲ್ 2013, 2016, 2023ರಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ್ದರು. ಇವರಲ್ಲದೇ, ಕ್ರಿಸ್ ಗೇಲ್ ಮತ್ತು ಡೇವಿಡ್ ವಾರ್ನರ್ ತಲಾ 3 ಸೀಸನ್ಗಳಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ್ದರು. ಫಾಫ್ ಡು ಪ್ಲೆಸಿಸ್ 2 ಸೀಸನ್ಗಳಲ್ಲಿ 600+ ರನ್ ದಾಖಲಿಸಿದ್ದಾರೆ. 6 ಸಿಕ್ಸರ್ ಬಾರಿಸಿದ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 400 ಸಿಕ್ಸರ್ ಬಾರಿಸಿದ ದಾಖಲೆ ಬರೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.