ಐಪಿಎಲ್ ನಲ್ಲಿ ಶುಭ್ ಮನ್ ಗಿಲ್ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
24ನೇ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಶುಭ್ ಮನ್ ಗಿಲ್, ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 44 ಎಸೆತ ಎದುರಿಸಿ ಗಿಲ್ 72 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ, ಈ ಪಂದ್ಯದಲ್ಲಿ ಅವರು 3 ಸಾವಿರ ರನ್ ಪೂರ್ತಿ ಮಾಡಿದ್ದರು.
ಈ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ 3 ಸಾವಿರ ರನ್ ಪೂರೈಸಿದ ಅತೀ ಕಿರಿಯ ಬ್ಯಾಟರ್ ಎಂಬ ದಾಖಲೆಗೆ ಗಿಲ್ ಸಾಕ್ಷಿಯಾಗಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ 26ನೇ ವಯಸ್ಸಿನಲ್ಲಿ (26 ವರ್ಷ, 186 ದಿನಗಳು) ಈ ಸಾಧನೆ ಮಾಡಿದ್ದರು. ಈಗ ಈ ದಾಖಲೆ ಗಿಲ್ ಹೆಸರಿಗೆ ಬಂದಿದೆ. ಗಿಲ್ 24ನೇ ವಯಸ್ಸಿನಲ್ಲಿಯೇ (24 ವರ್ಷ, 215 ದಿನಗಳು) 3 ಸಾವಿರ ರನ್ ಕಲೆ ಹಾಕಿದ್ದಾರೆ.
ಅಲ್ಲದೇ, ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 3 ಸಾವಿರ ರನ್ ಕಲೆಹಾಕಿದ 2ನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 80 ಇನಿಂಗ್ಸ್ಗಳ ಮೂಲಕ 3 ಸಾವಿರ ರನ್ ಕಲೆಹಾಕಿದ ಕೆ.ಎಲ್. ರಾಹುಲ್ ಅಗ್ರಸ್ಥಾನದಲ್ಲಿದ್ದರೆ, 94 ಇನಿಂಗ್ಸ್ಗಳಲ್ಲಿ 3 ಸಾವಿರ ರನ್ ಪೂರೈಸಿ ಎರಡನೇ ಸ್ಥಾನದಲ್ಲಿ ಗಿಲ್ ಇದ್ದಾರೆ.