ವಾಷಿಂಗ್ಟನ್ : ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಗೆ ಲಸಿಕೆ ಕಂಡು ಹಿಡಿಯಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಆದ್ರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲಸಿಕೆ ಇಲ್ಲದೆ ಈ ಸೋಂಕು ಹೋಗುತ್ತದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ವೈರಸ್ ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಹಲವು ವೈರಸ್ ಗಳು ಬಂದಿವೆ. ಈ ವೈರಸ್ ಗಳಿಗೆ ಔಷಧಿ ಕಂಡು ಹಿಡಿಯುವ ವೇಳೆ ವೈರಸ್ ಗಳು ಮಾಯವಾಗಿರುತ್ತದೆ. ಇದು ಎಲ್ಲಿಯೂ ಕಾಣಿಸುವುದಿಲ್ಲ. ಈ ವೈರಸ್ ಸಹ ಸಾಯುತ್ತದೆ. ಹೀಗಾಗಿ ಕೋವಿಡ್ 19 ಸಹ ಹೋಗುತ್ತದೆ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ ಟ್ರಂಪ್.
ಇನ್ನು ಚೀನಾ ಮತ್ತು ಅಮೆರಿಕದ ಮಧ್ಯೆ ಕೋವಿಡ್ 19 ಔಷಧಿ ಪತ್ತೆ ಹಚ್ಚುವ ವಿಷಯದಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದ್ದು ಯಾರು ಮೊದಲು ಔಷಧಿ ಕಂಡು ಹಿಡಿಯುತ್ತಾರೆ ಎಂಬ ಕುತೂಹಲ ಮೂಡಿದೆ.
ಈ ನಡುವೆ ಭಾರತಲ್ಲೂ ಔಷಧಿ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಮೌನವಾಗಿದ್ದುಕೊಂಡೇ ಭಾರತದ ಕಂಪನಿಗಳು ಔಷಧಿ ಕಂಡುಹಿಡಿಯುವ ಕೆಲಸ ಮಾಡುತ್ತಿವೆ.
ಈ ವರ್ಷದಲ್ಲೇ ಮೇಡ್ ಇನ್ ಇಂಡಿಯಾ ಕೋವಿಡ್ -19 ಔಷಧಿ ಲಭ್ಯವಾಗಲಿದೆ ಎಂದು ಬಯೋಕಾನ್ ಕಂಪನಿಯ ಆಡಳಿತ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.








