ಕೆಆರ್ ಎಸ್ ಬಿರುಕು ಬಿಟ್ಟಿದೆ : ಸಂಸದೆ ಸುಮಲತಾ
ಮಂಡ್ಯ : ಕಲ್ಲು ಗಣಿಗಾರಿಕೆಯಿಂದ ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಸಾಕಷ್ಟು ದಿನಗಳಿಂದ ಈ ಬಗ್ಗೆ ಸುದ್ದಿ ಹರಿದಾಡುತ್ತಲೇ ಇದೆ.
ಈ ಬಗ್ಗೆ ಇದೀಗ ಮಂಡ್ಯ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದು, ಕೆಆರ್‍ಎಸ್ ಡ್ಯಾಂಗೆ ಯಾವುದೇ ಅಪಾಯವಾಗದಂತೆ ತಡೆಯಬೇಕು. ಇಲ್ಲದಿದ್ದರೆ ಮುಂದೆ ನಾವೇ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೆ.ಎಂ.ದೊಡ್ಡಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 25 ವರ್ಷದಿಂದ ಆ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯೇ ಕೆಆರ್‍ಎಸ್ ಜಲಾಶಯದಲ್ಲಾಗಬಹುದಾದ ಅಪಾಯಕ್ಕೆ ಕಾರಣವಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದರು.
ಜಲಾಶಯ ಮಂಡ್ಯ ಜಿಲ್ಲೆಗೆ ಸೀಮಿತವಾಗಿಲ್ಲ. ಬೆಂಗಳೂರು ನಗರಕ್ಕೂ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಡ್ಯಾಂಗೆ ಅಪಾಯವಾದರೆ ಸಾಕಷ್ಟು ಜನರಿಗೆ ತೊಂದರೆಯಾಗಲಿದೆ.
ಆದ್ದರಿಂದ ಡ್ಯಾಂಗೆ ಯಾವುದೇ ಅಪಾಯ ಆಗಬಾರದು. ಒಂದು ವೇಳೆ ತೊಂದರೆ ಆಗಬಹುದು ಎನ್ನುವುದಾದರೆ ಅದನ್ನು ತಡೆಯಬೇಕು. ಸದ್ಯ ಏನಾಗುತ್ತಿದೆ ಎನ್ನುವುದು ತನಿಖೆಯಿಂದ ಹೊರಬೀಳಬೇಕಿದೆ.
ಅಪಾಯ ಇರುವುದು ಗೊತ್ತಿದ್ದರೂ ಸುಮ್ಮನೆ ಕುಳಿತರೆ ತಪ್ಪಾಗುತ್ತದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುಂದಾಗ ಬೇಕು ಎಂದು ಮನವಿ ಮಾಡಿಕೊಂಡರು.