ಮಹಾ ಗಡಿ ಖ್ಯಾತೆ – ಕರ್ನಾಟಕ ಬಸ್ ಗೆ ಅಡ್ಡ ಗಟ್ಟಿ ಮಸಿ ಬಳಿದ ಪುಂಡರು…
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಉದ್ಭವವಾಗಿದ್ದು, ಮಹಾರಾಷ್ಟ್ರ ಭಾಗದ ಒಂದು ಇಂಚು ಭೂಮಿಯನ್ನೂ ಸಹ ಬಿಟ್ಟುಕೊಡುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಗಡಿ ವಿವಾದ ಕುರಿತು ಕರ್ನಾಟಕ ಸಿಎಂ ಬೊಮ್ಮಾಯಿ ನೀಡಿರುವ ಹೇಳಿಕೆ ಖಂಡಿಸಿ ಮರಾಠ ಮಹಾಸಂಘ ಪ್ರತಿಭಟನೆ ನಡೆಸಿದ್ದು ಕರ್ನಾಟಕ ಬಸ್ಸಿಗೆ ಬಣ್ಣ ಬಳಿದು, ಮರಾಠಿಯಲ್ಲಿ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮಹಾರಾಷ್ಟ್ರ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ಅಖಿಲ ಭಾರತ ಮರಾಠಾ ಸಂಘದ ಕಾರ್ಯಕರ್ತರು ಪುಂಡಾಟಿಕೆ ನಡೆಸಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಪ್ಪಾಣಿ ಡಿಪೋಗೆ ಸೇರಿದ ಬಸ್ಸೊಂದನ್ನ ಅಡ್ಡಗಟ್ಟಿ ವಾಹನದ ಮೇಲೆ ಜೈ ಮಹಾರಾಷ್ಟ್ರ ಎಂದು ಕಪ್ಪು ಮಸಿಯಿಂದ ಬರೆದಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಹರಿಹಾಯ್ದಿರುವ ಮಾಜಿ ಸಿಎಂ ಉದ್ಧವ್ ಠಾಕ್ರೆ, ಬೊಮ್ಮಾಯಿಯವರಿಗೆ ಈಗೇನು ದೆವ್ವ ಹಿಡಿದಿದೆಯೇ, ಈಗ ಗಡಿ ವಿವಾದ ಬಗ್ಗೆ ಮಾತನಾಡುತ್ತಾರೆ. ಮಹಾರಾಷ್ಟ್ರದ 40 ಗ್ರಾಮಗಳು ಬೇಕೆಂದು ಈಗ ಹಠಾತ್ತಾಗಿ ಕೇಳುವ ಬೊಮ್ಮಾಯಿಯವರಿಗೆ ದೆವ್ವ ಹಿಡಿದಿದೆಯೇ ಎಂದು ಟೀಕಿಸಿದ್ದರು.
ಉಪಮುಖ್ಯಮಂತ್ರಿ ದೇವೆಂದ್ರ ಫಡ್ನಾವಿಸ್ ಮಾತನಾಡಿ ಮಹಾರಾಷ್ಟ್ರ ಭಾಗದಲ್ಲಿರುವ ಯಾವುದೇ ಗ್ರಾಮಗಳು ಕರ್ನಾಟಕಕ್ಕೆ ಹೋಗಲು ಬಿಡುವುದಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಬಲವಾಗಿ ಹೋರಾಡಲಿದ್ದು, ಬೆಳಗಾವಿ ಕಾರವಾರ ನಿಪ್ಪಾಣಿ ಭಾಗ ಸೇರಿದಂತೆ ಮರಾಠಿಗರು ಮಾತನಾಡುವ ಯಾವುದೇ ಗ್ರಾಮಗಳು ಕರ್ನಾಟಕ ಪಾಲಾಗಲು ಬಿಡುವುದಿಲ್ಲ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ “ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಗಡಿ ವಿವಾದ ಕುರಿತು ನೀಡುತ್ತಿರುವ ಹೇಳಿಕೆ ಪ್ರಚೋದನಕಾರಿಯಾಗಿದ್ದು, ಜನರನ್ನು ಕೆರಳಿಸುವಂತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ದೇವೇಂದ್ರ ಫಡ್ನವೀಸ್ ಹೇಳಿಕೆ ಪ್ರಚೋದನಕಾರಿಯಾಗಿದೆ. ಗಡಿ ವಿವಾದದಲ್ಲಿ ನಮ್ಮ ಸರ್ಕಾರ ನೆಲ, ಜನ, ಗಡಿಭಾಗದ ರಕ್ಷಣೆಗೆ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು.
KSRTC : Mahasangh protest against Kartana CM Bommai over his statement








