ಮೈಸೂರು: ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಸಂಘದ ಬಗ್ಗೆ ಮಾತನಾಡಿ ಬಾಯಿ ಚಪಲ ತೀರಿಸಿಕೊಳ್ಳುವ ಬದಲು, ಕಳೆದ 40 ವರ್ಷಗಳಿಂದ ಕಲ್ಯಾಣ ಕರ್ನಾಟಕಕ್ಕೆ ಏನಾದರೂ ಮಾಡಿದ್ದರೆ ಅದನ್ನು ಮೊದಲು ಹೇಳಲಿ” ಎಂದು ಕುಮಾರಸ್ವಾಮಿ ಖರ್ಗೆ ಅವರಿಗೆ ಚಾಟಿ ಬೀಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ದಿಶಾ ಸಮಿತಿ ಸಭೆಯಲ್ಲಿ ಭಾಗವಹಿಸುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ಆರ್‌ಎಸ್‌ಎಸ್ ಅನ್ನು ಬಂದ್ ಮಾಡುವುದಿರಲಿ, ಈಗ ಕಾಂಗ್ರೆಸ್ ಪಕ್ಷವೇ ಎಲ್ಲಾ ಕಡೆ ಬಂದ್ ಆಗುತ್ತಿದೆ. ಜನರೇ ಬಹುತೇಕ ಕಡೆ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡುತ್ತಿದ್ದಾರೆ. ಮೊದಲು ನಿಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಿ” ಎಂದು ಹೇಳಿದ್ದಾರೆ.
“ಪ್ರಿಯಾಂಕ್ ಖರ್ಗೆ ಅವರು ಬಾಯಿ ಚಪಲಕ್ಕೆ ಮತ್ತು ಮೂಲ ವಿಚಾರಗಳನ್ನು ಮರೆಮಾಚಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ” ಎಂದು ಕೇಂದ್ರ ಸಚಿವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.







