ಇದು ‘ಗ್ರೇಟ್ ವಾಲ್ ಆಫ್ ಇಂಡಿಯಾ’..!! ಕುಂಭಲಗಢ ಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು?

1 min read

ಇದು ‘ಗ್ರೇಟ್ ವಾಲ್ ಆಫ್ ಇಂಡಿಯಾ’..!! ಕುಂಭಲಗಢ ಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು?

ನಿಮಗೆಲ್ಲ ಚೀನಾದ ಮಹಾಗೋಡೆಯ ಬಗ್ಗೆ ತಿಳಿದಿದೆ. ಆದರೆ ಭಾರತದ ಮಹಾಗೋಡೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ರಾಜಸ್ಥಾನದಲ್ಲಿರುವ ಕೋಟೆಯೊಂದು ಭಾರತದ ಮಹಾ ಗೋಡೆ ಎಂತಲೇ ಖ್ಯಾತಿ ಗಳಿಸಿದೆ. ರಾಜಸ್ಥಾನದ ಉದಯಪುರದಿಂದ 64 ಕಿ.ಮೀ. ದೂರದಲ್ಲಿರುವ ಕುಂಭಲಗಢ ಕೋಟೆಯು 15ನೇ ಶತಮಾನದಲ್ಲಿ ರಾಣಾ ಕುಂಭ ನಿಂದ ನಿರ್ಮಿತವಾಗಿದೆ. ಚೀನಾ ಗೋಡೆಯ ಬಳಿಕ ಜಗತ್ತಿನ ಎರಡನೇ ಅತಿ ಉದ್ದದ ಗೋಡೆ ಇದಾಗಿದೆ.

ಮುಂದಿನ ಗೋಡೆಗಳು 15 ಅಡಿಯಷ್ಟು ದಪ್ಪವಿದ್ದರೆ, ಕೆಲವೊಂದು ಕಡೆಗಳಲ್ಲಿ 15 ಮೀಟರ್ಗಷ್ಟು ದಪ್ಪವಾಗಿವೆ. ಕೋಟೆಯು ಬೃಹದಾಕಾರದ ಏಳು ಹೊರದ್ವಾರಗಳನ್ನು ಹೊಂದಿದೆ. ಅವುಗಳಲ್ಲಿ ರಾಮ್ಪೋಲ್ ದೊಡ್ಡದಾದುದಾಗಿದೆ. ಈ ಗೋಡೆಗಳ ನಿರ್ಮಾಣಕ್ಕೆ ಎಲ್ಲಿಯೂ ಮಣ್ಣಿನ ಇಟ್ಟಿಗೆಗಳನ್ನು ಬಳಸಿಲ್ಲ. ಬದಲು ಭಾರವಾದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಗೋಡೆಯ ಮೇಲ್ಭಾಗದಲ್ಲಿ ಕಲ್ಲಿನ ಅಲಂಕಾರಿಕ ಕೆತ್ತನೆಗಳನ್ನು ಕಾಣಬಹುದು. ಹೀಗಾಗಿ ಈ ಕೋಟೆ ಇನ್ನಷ್ಟು ರಮಣೀಯವಾಗಿ ಗೋಚರಿಸುತ್ತದೆ. ರಜಪೂತರ ಕಾಲದ ವಾಸ್ತುಶಿಲ್ಪಕ್ಕೆ ಈ ಗೋಡೆ ಒಂದು ಉತ್ತಮ ಉದಾಹರಣೆ.

ಸುತ್ತುಹಾಕಲು 8 ಗಂಟೆಬೇಕು!

ಗೋಡೆಗಳು ತುಂಬಾ ಓರೆಕೋರೆಯಾಗಿರುವುದರಿಂದ ಅದನ್ನು ಒಂದು ಸುತ್ತು ಹಾಕಲು ಕಡಿಮೆ ಅಂದರೂ 8 ಗಂಟೆಗಳು ಬೇಕು. ಕುಂಭಲ್‌ಘಡ್‌ ಕೋಟೆಯು ಸಮುದ್ರ ಮಟ್ಟದಿಂದ 3600 ಅಡಿ ಎತ್ತರದಲ್ಲಿ, ಇದನ್ನು ಹದಿಮೂರು ಎತ್ತರದ ಅರಾವಳಿ ಪರ್ವತ ಶಿಖರಗಳ ಮಡಿಲಲ್ಲಿ ನಿರ್ಮಿಸಲಾಗಿದೆ.

ಯಾರಿಂದಲೂ ಗೆಲ್ಲಲು ಸಾಧ್ಯವಾಗಿಲ್ಲ ಈ ಕೋಟೆಯನ್ನ..!!

ಈ ಕೋಟೆಯನ್ನು ಯಾರಿಂದಲೂ ಗೆಲ್ಲಲು ಸಾಧ್ಯವಾಗಿಲ್ಲ. ಕೋಟೆಯ ತುತ್ತತಿದಿಯಲ್ಲಿ ಈ ಕೋಟೆಯಲ್ಲಿ ಮಹಾರಾಣ ಪ್ರತಾಪ್ನಿಂದ ನಿರ್ಮಿತವಾದ ಡೋಮ್ ಆಕಾರದ ಒಂದು ಅರಮನೆಯಿದೆ. ಇದನ್ನು ಬಾದಲ್ ಮಹಲ್ ಎಂದು ಕರೆಯುತ್ತಾರೆ. ಮಹಾರಾಣ ಪ್ರತಾಪ್ ಇಲ್ಲಿ ಅನಭಿಶಕ್ತ ದೊರೆಯಾಗಿ ಆಡಳಿತ ನಡೆಸಿದ್ದ.

ಕೋಟೆಯ ಒಳಗೆ 360 ದೇವಾಲಯಗಳನ್ನು ಕಾಣಬಹುದು. ಅವುಗಳಲ್ಲಿ 300 ಪುರಾತನ ಜೈನ ದೇವಾಲಯಗಳಾಗಿದ್ದು, ಉಳಿದವು ಹಿಂದು ದೇವಾಲಯವಾಗಿದೆ. ಇಲ್ಲಿನ ಶಿವದೇವಾಲಯ ಅತ್ಯಂತ ಪ್ರಸಿದ್ಧವಾಗಿದ್ದು, ಬೃಹದಾಕಾರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಈ ಕೋಟೆಯನ್ನು 2013ರಲ್ಲಿ ಇದನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಲಾಗಿದೆ.

ಕುಂಭಲ್‌ಘಡ್ ವನ್ಯಜೀವಿ ಅಭಯಾರಣ್ಯಗಳು ಲಯನ್ ಸಫಾರಿಗಳನ್ನು ಸಹ ಹೊಂದಿವೆ. ಅರಾವಳಿಯ ಬುಡದಲ್ಲಿ, ಈ ಪ್ರದೇಶವು ಆಸಕ್ತಿದಾಯಕ ಭೂಪ್ರದೇಶ ಮತ್ತು ಇತರ ನೈಸರ್ಗಿಕ ಅಂಶಗಳಿಂದ ಆಶೀರ್ವದಿಸಲ್ಪಟ್ಟಿದೆ. ಈ ಪ್ರದೇಶವು ಸಾಕಷ್ಟು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ರಜಪೂತ ರಾಯಲ್ಸ್ ಕಥೆಯನ್ನು ಚಿತ್ರಿಸುವ ಪ್ರತಿದಿನ ಸಂಜೆ 6: 45 ಕ್ಕೆ ಪ್ರಾರಂಭವಾಗುವ ವಿಶೇಷ ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಆನಂದಿಸಬಹುದು. ಈ ಪ್ರದರ್ಶನವು ಹಿಂದಿ ಭಾಷೆಯಲ್ಲಿರುತ್ತದೆ. ಇದರ ಟಿಕೆಟ್‌ಗಳ ಬೆಲೆಯು ಭಾರತೀಯರಿಗೆ 100 ರೂ. ಮತ್ತು ವಿದೇಶಿಯರಿಗೆ 250 ರೂ. 45 ನಿಮಿಷಗಳ ಕಾಲ ಈ ಪ್ರದರ್ಶನ ನಡೆಯುತ್ತದೆ.

ಬೇಸಿಗೆಯಲ್ಲಿ ಕುಂಭಲ್‌ಘಡ್‌ ಬಿಸಿ ಮತ್ತು ಶುಷ್ಕ ವಾತಾವರಣವನ್ನು ಹೊಂದಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಪ್ರಯಾಣವು ಸಾಕಷ್ಟು ಆಯಾಸವನ್ನುಂಟುಮಾಡುತ್ತದೆ.ಹೀಗಾಗಿ, ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ರಾಜಸ್ಥಾನ ಮತ್ತು ಸುತ್ತಮುತ್ತಲಿನ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಂದ ಕುಂಭಲ್‌ಘಡ್‌ಗೆ ಆಗಾಗ್ಗೆ ಬಸ್ ಸೇವೆಗಳಿವೆ. ಕ್ಯಾಬ್ ಅಥವಾ ಕಾರುಗಳನ್ನೂ ನೀವು ಬಾಡಿಗೆಗೆ ಪಡೆಯಬಹುದು.

ಬಾದಲ್ ಮಹಲ್ ವೀಕ್ಷಿಸದೇ ಹಿಂದಿರುಗಬೇಡಿ..!

ಈ ಕೋಟೆಯ ಮತ್ತೊಂದು ಆಕರ್ಷಣೆ ಬಾದಲ್ ಮಹಲ್. ಮೋಡಗಳ ಅರಮನೆ ಎಂದೂ ಕೂಡ ಕರೆಯಲಾಗುವ ಈ ಬಾದಲ್ ಮಹಲ್, ಕುಂಭಲ್ಗಡ್ ಕೋಟೆಯ ಮೇಲೆ ನೆಲೆಸಿದೆ. ಮರ್ದಾನಾ ಮಹಲ್ ಮತ್ತು ಜನಾನಾ ಮಹಲ್ ಈ ಅರಮನೆಗೆ ಕೂಡಿಕೊಂಡ ಎರಡು ಒಳಭಾಗಗಳು. ಇಲ್ಲಿನ ಭವ್ಯವಾದ ಕೊಠಡಿಗಳು ನೀಲಿ ಬಣ್ಣದ ಭಿತ್ತಿಚಿತ್ರಗಳಿಂದ ಅಲಂಕರಿಸಲ್ಪಟ್ಟಿದ್ದು 19ನೇ ಶತಮಾನದ ಕಾಲವನ್ನು ಪ್ರತಿನಿಧಿಸುವಂತಿದೆ. ಟುರ್ಕಾಯ್ಸ್, ಹಸಿರು ಮತ್ತು ಬಿಳಿ ಬಣ್ಣಗಳು ಕೊಠಡಿಗಳಲ್ಲಿ ಪ್ರಮುಖವಾಗಿ ಆವರಿಸಿವೆ.ಪ್ರವಾಸಿಗರು, ಜನಾನಾ ಮಹಲ್ ನಲ್ಲಿ ಕಲ್ಲಿನ ಜಾಲಿಗಳನ್ನು ಕಾಣಬಹುದಾಗಿದೆ. ಅಂದಿನ ರಾಣಿಯರು ಈ ಜಾಲಿಗಳ ಮೂಲಕ ಅರಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕಲಾಪಗಳನ್ನು ವಿಕ್ಷೀಸುತ್ತಿದ್ದರು. ಕೋಣೆಗಳು ತಮ್ಮ ಅನನ್ಯವಾದ ಹವಾನಿಯಂತ್ರಣ ವ್ಯವಸ್ಥೆಯಿಂದ ಕೂಡಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd