ಸುದ್ದಿ ಮನೆಯ ಲೇಡಿ ಸಿಂಗಂ.. ಈ ಶೋಭಾ ಮಳವಳ್ಳಿ..!
ಶೋಭಾ ಮಳವಳ್ಳಿ…ನನಗೆ ತುಂಬಾನೇ ಆತ್ಮೀಯರಲ್ಲ.. ಆದ್ರೂ ಆತ್ಮೀಯರೇ..! ಅದರಲ್ಲೂ ಅವರ ಕೆಲಸದ ವೈಖರಿ ಬಗ್ಗೆ ತುಂಬಾ ಗೌರವ ಇದೆ. ಅವರ ಬೆಳವಣಿಗೆಯನ್ನು ಹತ್ತಿರದಿಂದಲೇ ಗಮನಿಸುತ್ತಾ ಬಂದಿದ್ದೇನೆ. ಬಹುಶಃ ನನಗಿಂತ ಒಂದೆರಡು ವರ್ಷ ಸೀನಿಯರ್. ಸುಮಾರು 23 ವರ್ಷಗಳ ಹಿಂದೆ ನಾನು ಆಗ ಉದಯವಾಣಿ ದಿನ ಪತ್ರಿಕೆಯ ಕ್ರೀಡಾ ವರದಿಗಾರ. ಶೋಭಾ ವಿಜಯಕರ್ನಾಟಕ ಪತ್ರಿಕೆಯ ವರದಿಗಾರ್ತಿ..
ಶೋಭಾ ಅಂದ ತಕ್ಷಣ ನನ್ನ ಕಣ್ಣೇದುರು ಬರುವುದು ಮೊಣಕಾಲಿನಷ್ಟೇ ಉದ್ದವಿರುವ ಬ್ಯಾಗ್.. ಅದು ಟಿಪಿಕಲ್ ಪತ್ರಕರ್ತೆಯÀ ಸ್ಟೈಲ್. ಬಹುಶಃ ಅದು ಖಾದಿ ಬ್ಯಾಗ್ ಅನ್ಸುತ್ತೆ. ನಾನು ಪ್ರತಿಕೋದ್ಯಮಕ್ಕೆ ಎಂಟ್ರಿಯಾಗುವಷ್ಟರಲ್ಲಿ ಶೋಭಾ ಹೆಸರು ಕನ್ನಡ ಪತ್ರಿಕೋದ್ಯಮದಲ್ಲಿ ಚಿರಪರಿಚಿತವಾಗಿತ್ತು. ಆಗಲೇ ಶೋಭಾ ಮೀಡಿಯಾದಲ್ಲಿ ತನ್ನದೇ ಆದ ನೇಮ್ – ಫೇಮ್ ಅನ್ನು ಬೆಳೆಸಿಕೊಂಡಿದ್ದರು. ಅದರಲ್ಲೂ ಕೆಲಸದ ವಿಚಾರದಲ್ಲಿ ರಾಕ್ಷಸಿ ಎಂದು ಅವರನ್ನು ಇಷ್ಟಪಡದವರು ಕೂಡ ಹೇಳುತ್ತಿರುತ್ತಾರೆ. ಅಂತಹ ಪ್ರವೃತ್ತಿಯನ್ನು ಇಂದಿಗೂ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಅದು 2004.. ನಾನು ಉದಯವಾಣಿ ಬಿಟ್ಟು ಸೂರ್ಯೋದಯ ಎಂಬ ಪತ್ರಿಕೆಗೆ ಸೇರಿಕೊಂಡಿದ್ದೆ. ಅಲ್ಲಿ ಅವರು ಡಿಸ್ಟ್ರಿಕ್ಟ್ ಡೆಸ್ಕ್‍ನ ಮುಖ್ಯಸ್ಥೆಯಾಗಿದ್ದರು. ಅಲ್ಲಿಯೂ ಅದೇ ಡ್ರೆಸಿಂಗ್ ಸ್ಟೈಲ್. ಜೋರು ಧ್ವನಿ..ಜಿಲ್ಲಾ ವರದಿಗಾರರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ರೀತಿ, ತಪ್ಪು ಮಾಡಿದಾಗ ಡೆಸ್ಕ್ ಟೀಮ್‍ಗೆ ಬೈಯುತ್ತಿದ್ದ ಪರಿ.. ಸುದ್ದಿ ತಗೊಂಡು ಅದನ್ನು ಪಟಪಟನೇ ಟೈಪ್ ಮಾಡುತ್ತಿದ್ದ ಶೋಭಾ ಅವರ ಕೆಲಸದ ವೈಖರಿಯನ್ನು ದ್ವೇಷ ಮಾಡುವವರು ಕೂಡ ಮೆಚ್ಚುವಂತಿತ್ತು. ಅಂತಹುದರಲ್ಲಿ ನಾನು ಕೂಡ ಒಬ್ಬ. ಮೊದ ಮೊದಲು ಶೋಭಾ ಕಂಡ್ರೆ ನನಗೂ ಅಷ್ಟಕ್ಕಷ್ಟೇ..ಆದ್ರೆ ಕೆಲಸದ ಬಗ್ಗೆ ಶೋಭಾನಿಗಿರುವ ಬದ್ಧತೆ.. ಶಿಸ್ತು, ಬೈಲೈನ್ ಸ್ಟೋರಿಗಳನ್ನು ಬರೆದಾಗ ಅದನ್ನು ನೋಡಿ ಬೆನ್ನುತಟ್ಟಿ ಪ್ರೋತ್ಸಾಹ ಮಾಡುತ್ತಿದ್ದ ರೀತಿಯಿಂದ ಶೋಭಾ ಮೇಲಿದ್ದ ಅಸಹನೆ ಎಲ್ಲವನ್ನು ಮರೆಮಾಚುವಂತೆ ಮಾಡಿತ್ತು. ಏನು ರೈ ಸೂಪರ್ ಆಗಿ ಪೇಜ್ ಬಂದಿದೆ. ಚೆನ್ನಾಗಿ ಆರ್ಟಿಕಲ್ ಬರೆದಿದ್ದಿಯಾ ಅಂತ ಹೇಳುತ್ತಿದ್ದ ಶೋಭಾ ಮೇಲೆ ಗೌರವ ಇಮ್ಮಡಿಗೊಳ್ಳುವಂತೆ ಮಾಡಿತ್ತು. ಅದಕ್ಕೆ ಕಾರಣವೂ ಇದೆ. ಸೂರ್ಯೊದಯ ದಿನಪತ್ರಿಕೆಯ ಪ್ರಧಾನ ಸಂಪಾದಕರಗಾಗಿದ್ದ ಅರ್ಜುನ್‍ದೇವ್ ಸರ್, ಸಂಪಾದಕರಾಗಿದ್ದ ಮಹದೇವಪ್ಪ ಸರ್ ಅವರ ಮಾರ್ಗದರ್ಶನ ನಮ್ಮೋಳಗೆ ಸ್ಪರ್ಧೆಯನ್ನೇ ಏರ್ಪಡುವಂತೆ ಮಾಡಿತ್ತು. ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್ ಸರ್, ಲಕ್ಷ್ಮೀನಾರಾಯಣ ಸರ್, ರಾಜೇಂದ್ರ ಸರ್ ರಿಪೋರ್ಟಿಂಗ್ ಟೀಮ್‍ನಲ್ಲಿದ್ರೆ, ವೀರಣ್ಣ ಸರ್, ಚೆನ್ನಕೇಶವ,ವೆಂಕಟೇಶ್, ಹುಬ್ಬಳ್ಳಿ ಆವೃತ್ತಿಯ ಉದಯವಾಣಿ ಪತ್ರಿಕೆಯ ಸಂಪಾದಕ ಪ್ರಭು ನ್ಯಾಷನಲ್ ಡೆಸ್ಕ್‍ನಲ್ಲಿದ್ರು. ಸದ್ಯ ವಿಜಯವಾಣಿ ಪತ್ರಿಕೆಯ ಸಂಪಾದಕರಾದ ಚೆನ್ನೇಗೌಡರು ಶೋಭಾ ಟೀಮ್ ನಲ್ಲಿದ್ದರು. ಇದರ ಜೊತೆ ಸ್ಪೋಟ್ರ್ಸ್ ಟೀಮ್‍ನಲ್ಲಿ ನಾನು, ನಂದೀಶ್, ಮಂಜು ಇದ್ವಿ.. ಇಲ್ಲಿ ಪೇಜ್ ಲೇ ಔಟ್‍ನಿಂದ ಹಿಡಿದು ಸುದ್ದಿವಿಚಾರದಲ್ಲೂ ಸ್ಪರ್ಧೆ ಏರ್ಪಡುತ್ತಿತ್ತು. ಆದ್ರೆ ಬಾಯಿಬುಡುಕಿ ಶೋಭಾ ತನ್ನ ಮಾತಿನ ದಾಟಿಯಲ್ಲಿ ಎಲ್ಲರನ್ನೂ ಬಾಯಿಮುಚ್ಚುಸುತ್ತಿದ್ದರು. ಹೀಗಾಗಿ ಶೋಭಾ ಒಂಥಾರ ಆಗಲೇ ಸುದ್ದಿಮನೆಯ ಲೇಡಿ ಸಿಂಗಂ ಆಗಿದ್ದರು.

ಸೂರ್ಯೋದಯ ಪತ್ರಿಕೆಯ ಅಧಃಪತನದ ನಂತ್ರ ಶೋಭಾ ಉದಯ ಟಿವಿ ಸೇರಿಕೊಂಡ್ರು. ನಂತರ ಸುವರ್ಣ ನ್ಯೂಸ್ ನಲ್ಲಿ ತನ್ನ ಕಾಯಕವನ್ನು ಮುಂದುವರಿಸಿದ್ರು. ಬಹುಶಃ 2013-14 ಅನ್ಸುತ್ತೆ. ಶೋಭಾ ಸಮಯ ನ್ಯೂಸ್‍ಗೆ ಸೇರಿಕೊಂಡ್ರು. ಸಮಯ ಟಿವಿ ಕ್ಲೋಸ್ ಆದ ನಂತರ ಮತ್ತೆ ಸುವರ್ಣ ನ್ಯೂಸ್ ಸೇರಿಕೊಂಡಾಗ ಸುಮಾರು ಹತ್ತು ವರ್ಷಗಳ ನಂತ್ರ ನಾವಿಬ್ಬರು ಮತ್ತೆ ಸಹೋದ್ಯೋಗಿಗಳಾದೆವು. ಅದು ಕೂಡ ಒಂದೇ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದೇವು. ಸುವರ್ಣ ಇನ್‍ಪುಟ್ ಟೀಮ್‍ನಲ್ಲಿ ಶೋಭಾ, ನಾನು ಅಭಿ, ಪ್ರಕಾಶ್, ಕರಿಯಪ್ಪ, ಶಫಿ ಒಟ್ಟು ಆರು ಜನರಿದ್ದೇವು. ವೈಯಕ್ತಿಕ ವಿಚಾರ ಏನೇ ಇರಲಿ, ಸುದ್ದಿ ವಿಚಾರ ಆಗಿರಬಹುದು.. ಅಥವಾ ಟೀಮ್ ವಿಚಾರ ಬಂದಾಗ ಒಬ್ಬರೊನ್ನೊಬ್ಬರು ಬಿಟ್ಟುಕೊಡುತ್ತಿರಲಿಲ್ಲ. ಅಗತ್ಯ ಬಂದಾಗ ಎಲ್ಲವನ್ನೂ ತನ್ನ ಮೈಮೇಲೆ ಎಳೆದುಕೊಂಡು ಕೆಲಸ ಮಾಡೋ ಛಾತಿ ಶೋಭಾ ಅವರಿಗಿತ್ತು.. ಶಿಫ್ಟ್ ಎಡ್ಜೇಸ್ಟ್‍ಮೆಂಟ್ ಆಗಿರಬಹುದು.. ರಜೆ ತಗೋ ಸಂದರ್ಭವೇ ಆಗಿರಬಹುದು.. ನಾನು ನೋಡಿಕೊಳ್ಳುತ್ತೇನೆ ಎಂಬ ಮಾತು ಶೋಭಾ ಬಾಯಿಂದ ಕೇಳಿಬರುತ್ತಿತ್ತು. ಮೇಜರ್ ಸುದ್ದಿಗಳು ಬಂದಾಗ ಶೋಭಾ ಒಂಥರಾ ರಕ್ಷಸಿಯಾಗುತ್ತಿದ್ದರು. ಅಂದ ಹಾಗೇ ಶೋಭಾ ಜೊತೆ ಒಟ್ಟು ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಸುವರ್ಣ ನ್ಯೂಸ್‍ನಲ್ಲಿ ಕೆಲಸ ಬಿಟ್ಟ ಮೇಲೂ ಅಪರೂಪಕ್ಕೆ ಸಿಕ್ಕಿರುವುದು ಕಮ್ಮಿನೇ.. ಫೋನ್‍ನಲ್ಲಿ ಮಾತನಾಡುವಾಗ ಏನು ರೈ ಹೆಂಗಿದ್ದೀಯಾ ಕಣೋ ಎಂಬುದು ಮಾಮೂಲಿ ಪದಗಳು.
ಅಂದ ಹಾಗೇ ಶೋಭಾ ಮೇಲೆ ಕೆಲವೊಂದು ಆರೋಪಗಳಿವೆ. ಶೋಭಾ ಸಿಕ್ಕಾಪಟ್ಟೆ ಟಾರ್ಚರ್ ಕೊಡ್ತಾರೆ.. ಕೆಲಸದ ವಿಷ್ಯದಲ್ಲಿ ರಾಜಿ ಮಾಡಿಕೊಳ್ಳಲ್ಲ. ಬಾಯಿ ಸರಿ ಇಲ್ಲ. ಸಿಕ್ಕಾಪಟ್ಟೆ ಬೈಯ್ತಾರೆ.. ಹೀಗೆಲ್ಲಾ ಆರೋಪಗಳು ಇವೆ. ಆದ್ರೆ ಸುದ್ದಿ ಮನೆಯಲ್ಲಿ ಇದೆಲ್ಲಾ ಮಾಮೂಲಿ. ಹೀಗೆ ಇದ್ರೆನೇ ಬೆಳೆಯೋಕೆ ಸಾಧ್ಯ. ಯಾರು ಏನು ಅನ್ನಲಿ.. ಶೋಭಾ ಮಾತ್ರ ಡೋಂಟ್ ಕೇರ್. ಅಷ್ಟು ಗಟ್ಟಿಗಿತ್ತಿ ಈ ಮಳವಳ್ಳಿ ಹುಡುಗಿ.
ಇದೀಗ ಶೋಭಾ ರಿಪಬ್ಲಿಕ್ ಕನ್ನಡ ವಾಹಿನಿಯ ಸಂಪಾದಕಿಯಾಗಿದ್ದಾರೆ. ಹಾಗೇ ನೋಡಿದ್ರೆ ಶೋಭಾ ಯಾವತ್ತೋ ಪತ್ರಿಕೆ ಅಥವಾ ಟಿವಿಯ ಸಂಪಾದಕಿಯಾಗಬೇಕಿತ್ತು. ಆದ್ರೂ ತಡವಾಗಿ ಅವರ ಪ್ರತಿಭೆಗೆ ಮನ್ನಣೆ ಸಿಕ್ಕಿದೆ. ಆಲ್ ದಿ ಬೆಸ್ಟ್ ಶೋಭಾ..!
ಹಾಗಂತ ಶೋಭಾ ಯಾರದ್ದೋ ಲಾಬಿಯಿಂದ ಸಂಪಾದಕಿಯಾಗಿಲ್ಲ. ಅದರ ಹಿಂದೆ ಕಠಿಣ ಶ್ರಮ ಇದೆ. ಕೆಲಸದ ಮೇಲೆ ಅಷ್ಟೇ ಬದ್ಧತೆ ಇದೆ. ಶೋಭಾ ಬದುಕು ಏರಿಳಿತಗಳಿಂದ ಕೂಡಿದೆ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಾಕಷ್ಟು ನೋವು, ವೇದನೆ, ಬೇಸರ, ತಳಮಳಗಳನ್ನು ಕಂಡಿದ್ದಾರೆ. ಆದ್ರೂ ಎಂದಿಗೂ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಂಡಿಲ್ಲ. ತನ್ನ ಪ್ರತಿ ಬೆಳವಣಿಗೆಯ ಹಿಂದೆ ಕಣ್ಣೀರನ್ನು ಸುರಿಸಿಕೊಂಡು ಅದರಲ್ಲಿ ಖುಷಿ ಪಟ್ಟು ಕೊಂಡು ಇವತ್ತು ಈ ಸ್ಥಾನವನ್ನು ಅಲಂಕರಿಸಿದ್ದಾರೆ. ಹಾಗಂತ ನಾನು ಬಕೀಟ್ ಹಿಡಿಯಲು ಶೋಭಾ ಕುರಿತು ಬರೆದಿಲ್ಲ. ಶೋಭಾ ಜೊತೆಗಿನ ಒಡನಾಟ ಅಷ್ಟಕ್ಕಷ್ಟೆಯಾದ್ರೂ ದೂರದಿಂದಲೇ ಅವರ ಬೆಳವಣಿಗೆಯನ್ನು ಗಮನಿಸಿದ್ದೇನೆ. ಯಾಕೋ ಬರೆಯಬೇಕು ಎಂದು ಅನ್ಸಿತ್ತು.. ಬರೆದಿದ್ದೇನೆ. ಸಾಮಾನ್ಯ ಹಳ್ಳಿ ಹುಡುಗಿ ಇಂದು ಒಂದು ಪ್ರತಿಷ್ಠಿತ ಚಾನೆಲ್‍ನ ಸಂಪಾದಕಿಯಾಗಿರುವುದು ಹೆಮ್ಮೆಯ ವಿಷ್ಯ.. ಇಂದಿನ ದಿನಗಳಲ್ಲಿ ಸಂಪಾದಕನ ಸ್ಥಾನವನ್ನು ಅಲಂಕರಿಸುವುದಕ್ಕೂ ಜಾತಿ, ರಾಜಕೀಯ ಲಾಬಿ ನಡೆಯುತ್ತದೆ. ಅಂತಹುದರಲ್ಲಿ ಒಬ್ಬ ಪೋಲಿಸ್‍ನ ಮಗಳು ಇಂದು ಮಹತ್ವದ ಜವಾಬ್ದಾರಿಯನ್ನು ಅಲಂಕರಿಸಿರುವುದು ಲಾಬಿಯಿಂದಲ್ಲ. ಬದಲಾಗಿ ತನ್ನ ಟ್ಯಾಲೆಂಟ್‍ನಿಂದ. ನಿಮ್ಮ ಹೆಸರಿನಂತೆ ನಿಮ್ಮ ಮುಂದಿನ ಬದುಕು ಮುಂದಿನ ದಿನಗಳಲ್ಲಿ ಶೋಭೆಯನ್ನೇ ತರಲಿ..
ಸನತ್ ರೈ








