ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭದಲ್ಲಿ ತಮ್ಮ ಆತ್ಮವಿಶ್ವಾಸದ ಮಾತುಗಳಿಂದಲೇ ಸದ್ದು ಮಾಡಿದ್ದ ಡಾಗ್ ಸತೀಶ್, ಮನೆಯಿಂದ ಹೊರಬಂದರೂ ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ‘ನಾನು ವರ್ಲ್ಡ್ ನ್ಯೂಸ್ ಮಾಡ್ತೀನಿ, ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬನಾಗಿರುತ್ತೇನೆ’ ಎಂದು ಹೇಳಿ ಮನೆಗೆ ಕಾಲಿಟ್ಟಿದ್ದ ಅವರು, ಅನಿರೀಕ್ಷಿತವಾಗಿ ಮಧ್ಯಂತರದಲ್ಲಿ ಎಲಿಮಿನೇಟ್ ಆಗಿದ್ದರು. ಆದರೆ ಇದೀಗ ಮನೆಯಿಂದ ಹೊರಬಂದಿರುವ ಡಾಗ್ ಸತೀಶ್, ತಮ್ಮನ್ನು ಸುಳ್ಳುಗಾರ ಎಂದು ಕರೆದ ಸಹ ಸ್ಪರ್ಧಿ ಗಿಲ್ಲಿ ನಟ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಸೋತರೂ ತಣ್ಣಗಾಗದ ಆಕ್ರೋಶ
ಸಂದರ್ಶನವೊಂದರಲ್ಲಿ ತಮ್ಮ ಬಿಗ್ ಬಾಸ್ ಪಯಣದ ಬಗ್ಗೆ ಮಾತನಾಡಿದ ಸತೀಶ್, ಮನೆಯೊಳಗಿನ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. “ನಾನು ಬಿಗ್ ಬಾಸ್‌ಗೆ ಹೋಗಿದ್ದು ಹೆಸರು ಮಾಡಲು. ಆದರೆ ಮನೆಯೊಳಗೆ ನಟರನ್ನು ವಿಶೇಷವಾಗಿ ನೋಡಲಾಗುತ್ತಿತ್ತು. ನಾನು ಏನಾದರೂ ಹೇಳಲು ಮುಂದಾದರೆ, ನನ್ನ ಮಾತನ್ನು ಕೇಳಲು ಯಾರೂ ಸಿದ್ಧರಿರಲಿಲ್ಲ. ಪ್ರತಿಯೊಂದಕ್ಕೂ ಒಂದು ಕೊಂಕು ನುಡಿಯುತ್ತಿದ್ದರು. ಇದರಿಂದಾಗಿ ಒಂದು ವಾರದ ನಂತರ ನಾನು ಸಂಪೂರ್ಣವಾಗಿ ಮೌನಕ್ಕೆ ಶರಣಾದೆ. ಎಲ್ಲರೂ ನನ್ನಿಂದ ದೂರ ಉಳಿದದ್ದು ನನಗೆ ತೀವ್ರ ನೋವುಂಟು ಮಾಡಿತು” ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ಗಿಲ್ಲಿ ನಟ ಮೇಲೇಕೆ ಇಷ್ಟೊಂದು ಕೋಪ?
ತಮ್ಮ ಮೇಲಿನ ಆರೋಪಗಳಿಗೆ ಉತ್ತರ ನೀಡುತ್ತಾ, ಗಿಲ್ಲಿ ನಟ ಅವರ ಬಗ್ಗೆ ಡಾಗ್ ಸತೀಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ನನ್ನ ಸಾಧನೆಗಳ ಬಗ್ಗೆ, ಬೇರೆ ಬೇರೆ ದೇಶಗಳಲ್ಲಿ ನನ್ನ ಕುರಿತು ಸುದ್ದಿ ಪ್ರಕಟವಾದ ಬಗ್ಗೆ ಹಾಗೂ ನಾನು ಮಾಡಿದ ಸಿನಿಮಾಗಳ ಬಗ್ಗೆ ಹೇಳಿಕೊಂಡಾಗ, ಗಿಲ್ಲಿ ನಟ ಅದೆಲ್ಲವನ್ನೂ ಸುಳ್ಳು ಎಂದು ಹೇಳಿದರು. ಅವರಿಗೆ ನನ್ನ ಬಗ್ಗೆ ಏನು ಗೊತ್ತು? ಜಗತ್ತಿನಲ್ಲಿ ಕೇವಲ 7-8 ಚಾನೆಲ್‌ಗಳಿವೆ ಅಂದುಕೊಂಡಿದ್ದಾರೆ. ಆದರೆ ಅವರು ನೋಡಿರುವುದೇ ಅಷ್ಟು” ಎಂದು ಸತೀಶ್ ತಿರುಗೇಟು ನೀಡಿದ್ದಾರೆ.
ನನ್ನ ಸಾಮರ್ಥ್ಯವನ್ನು ಸಾಬೀತು ಮಾಡುತ್ತೇನೆ
“ಗಿಲ್ಲಿ ನಟ ಮನೆಯಿಂದ ಆಚೆ ಬಂದ ಮೇಲೆ ನನ್ನ ಸಾಮರ್ಥ್ಯ ಏನು ಎಂಬುದನ್ನು ಅವರಿಗೆ ಸಾಬೀತುಪಡಿಸುತ್ತೇನೆ. ಮನೆಯಲ್ಲಿದ್ದ ಕರಿಬಸಪ್ಪ ಅವರು ನನ್ನ ಬಗ್ಗೆ ತಿಳಿದುಕೊಂಡು ನನಗೆ ಕರೆ ಮಾಡಿ ಮಾತನಾಡಿದ್ದನ್ನು ಎಲ್ಲರೂ ನೋಡಿದ್ದಾರೆ. ಅದೇ ರೀತಿ ಗಿಲ್ಲಿ ಕೂಡ ನನ್ನ ಬಳಿ ಮಾತನಾಡದಿದ್ದರೆ ಕೇಳಿ. ಅವರಿಗೆ ನನ್ನ ನಿಜವಾದ ಪರಿಚಯ ಮಾಡಿಸುತ್ತೇನೆ. ಗಿಲ್ಲಿ ಆಚೆ ಬರಲಿ, ನಾನೇನು ಎಂಬುದನ್ನು ತೋರಿಸುತ್ತೇನೆ” ಎಂದು ಡಾಗ್ ಸತೀಶ್ ನೇರ ಸವಾಲು ಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಆರಂಭವಾದ ಈ ವಾಕ್ಸಮರ ಈಗ ಹೊರಗೂ ಮುಂದುವರಿದಿದ್ದು, ಡಾಗ್ ಸತೀಶ್ ತಮ್ಮ ಮಾತನ್ನು ಹೇಗೆ ಸಾಬೀತುಪಡಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.








