ಕೊರೋನಾ ಸೋಂಕಿನ ನಡುವೆ ಅಮೆರಿಕದಲ್ಲಿ ಲಾಕ್ ಡೌನ್ ತೆಗೆಯಬೇಕು, ಬೇಡ ಎಂಬ ಬಗ್ಗೆ ಡೆಮಾಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷದ ನಡುವೆ ಗಲಾಟೆ ಶುರುವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಎಲ್ಲಾ 50 ಪ್ರಾಂತ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಮನೆಯಿಂದ ಹೊರಗೆ ಬರುವುದನ್ನು ನಿಷೇಧಿಸಲಾಗಿದೆ. ಡೆಮಾಕ್ರಾಟ್ ಪಕ್ಷದ ಗವರ್ನರ್ ಗಳು ಇರುವ ಮಿನ್ನೆಸೋಟ, ಮಿಚಿಗನ್ ಮತ್ತು ವರ್ಜೀನಿಯಾದಲ್ಲಿ ಮನೆಯಲ್ಲಿಯೇ ಇರಿ, ಲಾಕ್ ಡೌನ್ ಬೇಡ ಎಂಬ ನಿಯಮಗಳ ವಿರುದ್ಧ ಬೀದಿಗೆ ಇಳಿದು ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದು, ಇದಕ್ಕೆ ಪ್ರಚೋದನೆ ನೀಡಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಲಿಬರೇಟ್’ ಎಂಬ ಟ್ವೀಟ್ ಎಂದು ಪ್ರತಿಪಕ್ಷ ಡೆಮಾಕ್ರಾಟ್ ಆರೋಪಿಸಿದೆ.
ಮಿಚಿಗನ್ ನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಪ್ರತಿಭಟನೆಕಾರರು ಬೀದಿಗಿಳಿದಿದ್ದು, ಕೆಲವರು ಶಸ್ತ್ರಾಸ್ತ್ರಗಳನ್ನು ಹಿಡಿದು ಕೊಂಡು ಪ್ರತಿಭಟಿಸಿರುವುದು ಆತಂಕ ಮೂಡಿಸಿದೆ.
ಅಧ್ಯಕ್ಷ ಟ್ರಂಪ್ ಶುಕ್ರವಾರ ಲಾಕ್ ಡೌನ್ ತೆರವು ಕುರಿತು 3 ಹಂತದ ಯೋಜನೆಯನ್ನು ಪ್ರಕಟಿಸಿದ್ದು, ಲಾಕ್ ಡೌನ್ ಕುರಿತು ನಿರ್ಧಾರ ತೆಗೆದುಕೊಳ್ಳುವುದನ್ನು ಪ್ರಾಂತ್ಯಗಳ ಗವರ್ನರ್ ಗಳ ವಿವೇಚನೆಗೆ ಬಿಟ್ಟಿದ್ದರು. ಇದರ ವಿರುದ್ಧ ಸಾವಿರಾರು ಮಂದಿ ಬೀದಿಗಿಳಿದು ನಿರ್ಬಂಧ ತೆರವುಗೊಳಿಸಬೇಕು ಎಂದು ಮಿನ್ನೆಸೋಟ, ಮಿಚಿಗನ್ ಮತ್ತು ವರ್ಜಿನಿಯಾ ಪ್ರಾಂತ್ಯದಲ್ಲಿ ಟ್ರಂಪ್ ಪರ ಪೋಸ್ಟರ್ ಹಿಡಿದು ಪ್ರತಿಭಟನೆಯ ಕಿಚ್ಚು ಹಚ್ಚಿದರು. ಒರ್ಲಾಂಡೋ, ಫ್ಲಾರಿಡಾಗಳಲ್ಲಿ ‘ಓಪನ್ ಫ್ಲಾರಿಡಾ’ ಸೇರಿದಂತೆ ಹಲವು ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಮಿಚಿಗನ್ ಗವರ್ನರ್, ಡೆಮಾಕ್ರಾಟ್ ಪಕ್ಷದ ನಾಯಕಿ ಗ್ರೆಚೆನ್ ವಿಟ್ಮರ್ ಕೆಲ ದಿನದ ಹಿಂದೆ ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮ ಜಾರಿ ಮಾಡಿದ್ದರೆ, ವರ್ಜೀನಿಯಾದಲ್ಲಿ ಗನ್ ಹೊಂದುವುದರ ಬಗ್ಗೆ ನಿಷೇಧ ಹೇರಲಾಗಿತ್ತು. ಇದರ ವಿರುದ್ಧ ಆಕ್ಷೇಪ, ಟೀಕೆಗಳು ಶುರುವಾಗಿದ್ದವು. ಶನಿವಾರ ಅಧ್ಯಕ್ಷ ಟ್ರಂಪ್ ಸರಣಿ ಟ್ವೀಟ್ ಗಳನ್ನು ಮಾಡುತ್ತಾ ಲಿಬರೇಟ್ ಮಿಚಿಗನ್, ಮಿನ್ನೆಸೋಟ, ವರ್ಜಿನಿಯಾ ಎಂದು ಬರೆದಿದ್ದರು.
ಪ್ರತಿಪಕ್ಷ ಡೆಮಾಕ್ರಾಟ್ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದೇಶದಲ್ಲಿ ಬಂಡಾಯದ ಕಿಚ್ಚು ಹೊತ್ತಿಸಲು ಟ್ರಂಪ್ ಕುಮಕ್ಕು ನೀಡುತ್ತಿದ್ದಾರೆ. ಸುಳ್ಳುಗಳ ಮೂಲಕ ಜನರ ಹಾದಿ ತಪ್ಪಿಸಿ ಲಕ್ಷಾಂತರ ಜನರ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದು, ಈ ಮೂರು ರಾಜ್ಯಗಳ ಡೆಮಾಕ್ರಾಟ್ ಪಕ್ಷದ ಗವರ್ನರ್ ಗಳು ಪ್ರತಿಭಟನಾಕಾರರೊಂದಿಗೆ ಕೆಟ್ಟದ್ದಾಗಿ ವರ್ತಿಸಿದ್ದಾರೆ. ನಾನು ಮಾಡಿರುವ ಟ್ವೀಟ್ ಲಾಕ್ ಡೌನ್ ಗೆ ಸಂಬಂಧ ಪಟ್ಟದಲ್ಲ. ವರ್ಜೀನಿಯಾದಲ್ಲಿ ಗನ್ ಗೆ ನಿಷೇಧ ಹೇರಲಾದ ಕಾಯ್ದೆಗೆ ಸಂಬಂಧ ಪಟ್ಟದ್ದು ಎಂದಿದ್ದಾರೆ.
ಜನರ ಪ್ರತಿಭಟನೆಗಳ ಬಗ್ಗೆ ಗವರ್ನರ್ ಗಳು ಪ್ರತಿಕ್ರಿಯೆ ನೀಡಿದ್ದು, ಫ್ಲಾರಿಡ ಗವರ್ನರ್ ರಾನ್ ಡೆ ಸ್ಯಾಂಟಿಸ್ ಮಾತನಾಡಿ ಕೊರೊನಾ ಸೋಂಕು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಅವರಲ್ಲಿ ಅರಿವು ಇದೆ ಎಂದಾದರೆ ಬೀಚ್ ಗಳಿಗೆ ಮತ್ತು ಪಾರ್ಕ್ ಗಳಿಗೆ ಪ್ರವೇಶ ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೆಕ್ಸಾಸ್ ನ ಗವರ್ನರ್ ಗ್ರೆಗ್ ಅಬ್ಬೋಟ್ ಮಾತನಾಡಿ ಸರ್ಕಾರಿ ಸ್ವಾಮ್ಯದ ಪಾರ್ಕ್, ಕೆಲವೊಂದು ಸಣ್ಣ ಪ್ರಮಾಣದ ಮಳಿಗೆಗಳು ವಹಿವಾಟು ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.
ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಕೊರೋನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ದಾಖಲಾಗಿರುವ ಅಮೆರಿಕದಲ್ಲಿ ಲಾಕ್ ಡೌನ್ ಪರ-ವಿರೋಧದ ಹೋರಾಟ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವರ್ಷಾಂತ್ಯಕ್ಕೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ವರ್ಷದ ಆರಂಭದಲ್ಲಿ ಜನಪ್ರಿಯತೆಯ ಗ್ರಾಫ್ ನಲ್ಲಿ ಏರಿಕೆಯಲ್ಲಿದ್ದ ಟ್ರಂಪ್, ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ಅವರು ಕೈಗೊಂಡ ಕ್ರಮಗಳಿಂದ ಇಳಿಮುಖ ಕಂಡಿದ್ದರು.








