ಎಲ್ ಎಸ್ ಜಿ ತಂಡವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ಗೆ ಮತ್ತೊಮ್ಮೆ ಸೋಲಿನ ರುಚಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಭರ್ಜರಿ ಶತಕ ಮತ್ತು ಶಿವಂ ದುಬೆ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿ ಓವರ್ ಗಳಲ್ಲಿ 4 ವಿಕೆಟ್ ಕಳೆದಕೊಂಡು 210 ರನ್ ಗಳಿಸಿತ್ತು. ಆದರೆ, ಗುರಿ ಬೆನ್ನಟ್ಟಿದ್ದ ಲಕ್ನೋ ತಂಡಕ್ಕೆ ಮಾರ್ಕಸ್ ಸ್ಟೋಯಿನಿಸ್ ಕೊನೆಯ ಓವರ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವುದರ ಮೂಲಕ ಗೆಲುವು ತಂದು ಕೊಟ್ಟರು.
ಲಕ್ನೋ ತಂಡ ಆರಂಭದಿಂದಲೂ ಹಿನ್ನಡೆ ಅನುಭವಿಸಿತ್ತು. ಕೊನೆಯವರೆಗೂ ಚೆನ್ನೈ ಬಳಿಯ ಗೆಲುವಿನ ಸಾಧ್ಯತೆ ಹೆಚ್ಚಾಗಿತ್ತು. ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ನೀಡಲಿಲ್ಲ. ಡಿ ಕಾಕ್ ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಕೆಎಲ್ ರಾಹುಲ್ 14 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ ಕೇವಲ 16 ರನ್ ಗಳಿಸಿದರು. ದೇವದತ್ ಪಡಿಕ್ಕಲ್ 19 ಎಸೆತಗಳಲ್ಲಿ 13 ರನ್ ಗಳಿಸಿದರು. ಪೂರನ್ ಪೂರನ್ 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ 34 ರನ್ ಗಳಿಸಿ ಪೆವಿಲಿಯನ್ ಸೇರಿದರು.
ನಂತರ ಬಂದ ಮಾರ್ಕಸ್ ಸ್ಟೋಯಿನಿಸ್ ಕೇವಲ 63 ಎಸೆತಗಳಲ್ಲಿ 13 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿ ಅಜೇಯ 124 ರನ್ ಗಳಿಸುವ ಮೂಲಕ ತಂಡಕ್ಕೆ ಜಯ ತಂದು ಕೊಟ್ಟರು. ದೀಪಕ್ ಹೂಡಾ 6 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ ಅಜೇಯ 17 ರನ್ ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಅಜಿಂಕ್ಯ ರಹಾನೆ ಉತ್ತಮ ಆರಂಭ ನೀಡಲಿಲ್ಲ. ತಂಡದ ಮೊತ್ತ 4 ರನ್‌ಗಳಾಗಿದ್ದಾಗ 1 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ಔಟಾದರು. ಡೇರಿಲ್ ಮಿಚೆಲ್ 11 ರನ್ ಗಳಿಸಿದರು.
ರವೀಂದ್ರ ಜಡೇಜಾ 16 ರನ್ ಗಳಿಸಿದರು. ಶಿವಂ ದುಬೆ ಕೇವಲ 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಸಮೇತ 66 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು. ರುತುರಾಜ್ ಕೇವಲ 60 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ 108 ರನ್‌ಗಳ ಶತಕ ಬಾರಿಸಿದರು. ಮಾಜಿ ನಾಯಕ ಎಂಎಸ್ ಧೋನಿ ಕ್ರೀಸ್‌ಗೆ ಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮ ಪಟ್ಟರು. ಧೋನಿ ಒಂದೇ ಎಸೆತ ಎದುರಿಸಿ ನಾಲ್ಕು ರನ್ ಸಿಡಿಸಿದರು. ಈ ಗೆಲುವಿನ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆಡಿದ 8 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲುವು ಮತ್ತು 3 ಪಂದ್ಯಗಳಲ್ಲಿ ಸೋತು ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ 8 ಪಂದ್ಯಗಳಲ್ಲಿ 4 ಗೆಲುವು ಮತ್ತು 4 ಸೋಲುಗಳೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದೆ.