Madhya Pradesh – ನದಿಯಲ್ಲಿ ಸ್ನಾನ ಮಾಡುತ್ತಿದ್ದ 10 ವರ್ಷದ ಬಾಲಕನನ್ನ ನುಂಗಿದ ಮೊಸಳೆ
10 ವರ್ಷದ ಬಾಲಕನನ್ನು ಮೊಸಳೆ ನುಂಗಿರುವ ಘಟನೆ ಮಧ್ಯಪ್ರದೇಶದ ಶಿಯೋಪುರದಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಚಂಬಲ್ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮೊಸಳೆ ಬಾಲಕನ ಮೇಲೆ ದಾಳಿ ಮಾಡಿ ಬಾಲಕನನ್ನು ನದಿಗೆ ಎಳೆದೊಯ್ದಿದೆ.
ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಆತನ ಕುಟುಂಬ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿ ದೊಣ್ಣೆ, ಹಗ್ಗ ಹಾಗೂ ಬಲೆಯಿಂದ ಮೊಸಳೆಯನ್ನು ಹಿಡಿದು ನದಿಯಿಂದ ಹೊರಗೆ ಎಳೆದಿದ್ದಾರೆ.
ಅಷ್ಟರಲ್ಲಿ ಘಟನೆಯ ಬಗ್ಗೆ ಮಾಹಿತಿ ಪಡೆದ ವನ್ಯಜೀವಿ ಅಧಿಕಾರಿಗಳು ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ. ಎರಡೂ ತಂಡಗಳು ಮೊಸಳೆಯನ್ನು ಗ್ರಾಮಸ್ಥರ ಹಿಡಿತದಿಂದ ರಕ್ಷಿಸಲು ಯತ್ನಿಸಿದವು. ಆದರೆ, ಸಂಜೆಯವರೆಗೂ ಬಾಲಕನ ಕುಟುಂಬಸ್ಥರು ಇದಕ್ಕೆ ಒಪ್ಪಿರಲಿಲ್ಲ. 10 ವರ್ಷದ ಮಗುವಿನ ಕುಟುಂಬಸ್ಥರು ಮೊಸಳೆಯ ಹೊಟ್ಟೆಯಲ್ಲಿ ಮಗು ಜೀವಂತವಾಗಿರಬಹುದೆಂಬ ನಿರೀಕ್ಷೆಯಲ್ಲಿದ್ದರು. ಮಗುವನ್ನು ಉಗುಳಿದಾಗ ಮಾತ್ರ ಮೊಸಳೆಯನ್ನು ಬಿಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಕೊನೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಮೊಸಳೆ ಸಂರಕ್ಷಣಾ ವಿಭಾಗದವರು ಬಾಲಕನ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟು ಗ್ರಾಮಸ್ಥರಿಂದ ಮೊಸಳೆಯನ್ನ ಬಿಡಿಸಿದ್ದಾರೆ. Madhya Pradesh – 10-year-old boy swallowed by giant crocodile while bathing in MP’s Chambal river