ಆರ್ ಕೆ ನಾರಾಯಣ್ ಅವರ ಬರಹಗಳ ಆಧಾರಿತ, ಶಂಕರ್ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಕನ್ನಡದಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಶಂಕರ್ ನಾಗ್ ನಿರ್ದೇಶಿಸಿದ್ದ ಈ ಧಾರಾವಾಹಿ, ದೂರದರ್ಶನದಲ್ಲಿ 1986ರಲ್ಲಿ ಪ್ರಸಾರವಾಗಿತ್ತು. ಕನ್ನಡಿಗರೇ ನಿರ್ದೇಶಿಸಿದ, ಕನ್ನಡದವರೇ ನಿರ್ಮಾಪಕರಾಗಿದ್ದ, ಕನ್ನಡದ ಕಲಾವಿದರೇ ಹೆಚ್ಚಿದ್ದ ಈ ಧಾರಾವಾಹಿ, ಕನ್ನಡಿಗರಿಗೆ ಅವರ ಭಾಷೆಯಲ್ಲಿ ಸಿಕ್ಕಿರಲಿಲ್ಲ. ಕಾರಣ ಈ ಧಾರಾವಾಹಿ ಪ್ರಾರಂಭದಲ್ಲಿ ಇಂಗ್ಲಿಷ್ ಮತ್ತು ನಂತರ ಹಿಂದಿಯಲ್ಲಿ ಪ್ರಸಾರವಾಗಿತ್ತು. ಸುಮಾರು ಎಂಟು ಹತ್ತು ವರ್ಷಗಳ ಹಿಂದಿನಿಂದಲೇ ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ಡಬ್ ಮಾಡಿ ತರುವ ಪ್ರಯತ್ನಗಳು ಆರಂಭವಾಗಿದ್ದವು. ವಿರೋಧ, ಅಡ್ಡಿ ಆತಂಕಗಳ ನಡುವೆ ಕೊನೆಗೂ ಈ ಪ್ರಯತ್ನ ಫಲಿಸಿದೆ. ಖಾಸಗಿ ವಾಹಿನಿಯಲ್ಲಿ ಮಾಲ್ಗುಡಿ ಡೇಸ್ ಪ್ರಸಾರವಾಗಲಿದೆ.
ಪ್ರಸಾರದ ದಿನಾಂಕ, ಸಮಯ
‘ಮಾಲ್ಗಡಿ ಡೇಸ್’ ಧಾರಾವಾಹಿಯ ಕನ್ನಡ ಡಬ್ಬಿಂಗ್ ಅವತರಣಿಕೆಯು ಮೇ 11ರಿಂದ ಪ್ರಸಾರವಾಗಲಿದೆ. ವಾರದ ಐದು ದಿನ ‘ಮಾಲ್ಗುಡಿ ಡೇಸ್’ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.
ಇನ್ನು ಉತ್ತಮ ಕಾರ್ಯಕ್ರಮಗಳು, ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡುವ ಮೂಲಕ ಕನ್ನಡಿಗರಿಗೆ ತಲುಪಿಸಬೇಕೆಂಬ ಹೋರಾಟ ದಶಕಗಳಿಂದ ನಡೆಯುತ್ತಿದೆ. ಹಾಗೆಯೇ ಕನ್ನಡಿಗರ ಹೆಮ್ಮೆಯ ‘ಮಾಲ್ಗುಡಿ ಡೇಸ್’ ಅನ್ನು ಕನ್ನಡದಲ್ಲಿ ಪ್ರಸಾರ ಮಾಡುವ ಸಂಬಂಧ 2012ರಿಂದಲೂ ಆಂದೋಲನ ನಡೆಯುತ್ತಿತ್ತು. ಅದಕ್ಕೆ ಸದ್ಯ ಜಯ ಸಿಕ್ಕಿದೆ ಎಂದು ಡಬ್ಬಿಂಗ್ ಪರ ಹೋರಾಟಗಾರರು ಸಂಭ್ರಮಿಸುತ್ತಿದ್ದಾರೆ.