ಕಲಬುರಗಿ | ವರದಕ್ಷಿಣೆಗಾಗಿ ಪತ್ನಿಯನ್ನ ಕೊಲೆ ಮಾಡಿದ ಪತಿ
ಕಲಬುರಗಿ : ವರದಕ್ಷಿಣೆಗಾಗಿ ದೈಹಿಕ ಹಿಂಸೆ ಕೊಟ್ಟು ಪತ್ನಿಯನ್ನ ಪತಿಯೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಧರ್ಮವಾಡಿಯಲ್ಲಿ ನಡೆದಿದೆ.
ಪ್ರೀತಿ ಪ್ರವೀಣ ಚೋಪಲೆ ಕೊಲೆಯಾದ ಮಹಿಳೆಯಾಗಿದ್ದು, ಗಂಡ ಪ್ರವೀಣ ಕೊಲೆಗೈದ ಆರೋಪಿಯಾಗಿದ್ದಾನೆ.
ಪ್ರೀತಿ ಎರಡು ವರ್ಷದ ಹಿಂದೆ ಧರ್ಮವಾಡಿಯ ಪ್ರವೀಣ ಚೋಪಲೆ ಎಂಬೋರನ್ನ ಮದುವೆ ಮಾಡಿಕೊಂಡಿದ್ದರು.
ಈ ದಂಪತಿಗೆ ಒಂದು ವರ್ಷದ ಗಂಡು ಮಗುವಿದ್ದು, ಮದುವೆ ಸಂದರ್ಭದಲ್ಲಿ 4 ತೊಲೆ ಬಂಗಾರ, 51 ಸಾವಿರ ವರದಕ್ಷಿಣೆ ನೀಡಲಾಗಿತ್ತು.
ಇಷ್ಟಾದರೂ ತವರು ಮನೆಯಿಂದ ಇನ್ನೂ 50 ಸಾವಿರ ತರುವಂತೆ ಕಿರುಕುಳ ನೀಡುತ್ತಿದ್ದನಂತೆ.
ಈ ಕಿರುಕುಳದಿಂದ ಬೇಸತ್ತಿದ್ದ ಪ್ರೀತಿ ತವರು ಮನೆಯಲ್ಲಿದ್ದಳು.
ಆದ್ರೆ ಏಪ್ರಿಲ್ 19ರಂದು ಪ್ರವೀಣ ಬಂದು ಹೆಂಡತಿಯನ್ನು ಕರೆದುಕೊಂಡು ಹೋಗಿದ್ದು, ಬೆಳಿಗ್ಗೆ ಮನೆಯಲ್ಲಿಯೇ ನೇಣು ಬಿಗಿದು ಕೊಲೆ ಮಾಡಲಾಗಿದೆ.
ಮೃತ ಪ್ರೀತಿಯ ತಂದೆ ಹಣಮಂತರಾವ ಅವರು ಅತ್ತೆ ಹೌಸಾಬಾಯಿ, ಮಾವ ಬಾಬುರಾವ, ನಾದಿನಿ ರೂಪಾ, ಗಂಡ ಪ್ರವೀಣ, ಭಾವ ರಾಮ ವಿರುದ್ಧ ನರೋಣಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.