Mandya Honeytrap – ನಡೆದದ್ದೇ ಬೇರೆ ದೂರು ಕೊಟ್ಟದ್ದೇ ಬೇರೆ – ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಹನಿಟ್ರ್ಯಾಪ್ ಸುಳಿಗೆ ಸಿಲುಕಿ 50 ಲಕ್ಷ ರುಪಾಯಿ ಕಳೆದುಕೊಂಡಿದ್ದ ಪ್ರತಿಷ್ಠಿತ ಚಿನ್ನದ ವ್ಯಾಪಾರಿಯೊಬ್ಬರ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಂಡ್ಯದ ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಆಗಸ್ಟ್ 19ರಂದು ಮಂಡ್ಯದ ಪಶ್ಚಿಮ ಠಾಣೆಗೆ ಕಿಡ್ನಾಪ್ ಮತ್ತು ಹನಿಟ್ರ್ಯಾಪ್ ಕುರಿತಂತೆ ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅತ್ತ ತನಿಖೆ ನಡೆಯುತ್ತಿರುವಾಗಲೇ ಇತ್ತ ಆಡಿಯೋ ಹಾಗೂ ವೀಡಿಯೋವೊಂದು ಬಿಡುಗಡೆಯಾಗಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ವಿದ್ಯಾರ್ಥಿಯೊಬ್ಬಳನ್ನು ಲಾಡ್ಜ್‌ಗೆ ಕರೆಸಿಕೊಳ್ಳಲು ತಾನು ಲೆಕ್ಚರ್ ಎಂದು ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ಪುಸಲಾಯಿಸಿದ್ದನು. ಮೈಸೂರಿನ ಲಾಡ್ಜ್‌ಗೆ ವಿದ್ಯಾರ್ಥಿನಿ ಕರೆಸಿಕೊಂಡ ವೇಳೆ ಅಲ್ಲಿಗೆ ಎಂಟ್ರಿಕೊಟ್ಟ ಆರೋಪಿ ಸಲ್ಮಾಭಾನು ಆಂಡ್ ಟೀಂ ಪಂಚೆ, ಬನಿಯನ್‌ನಲ್ಲಿದ್ದ ಜಗನಾಥ್ ಶೆಟ್ಟಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಜಗನ್ನಾಥ್ ಶೆಟ್ಟಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದಾಡಿ ಹೆದರಿಸಿದ್ದಾರೆ. ಈ ವೇಳೆ ತನ್ನದು ತಪ್ಪಾಯ್ತು ಎಂದು ಬಿಟ್ಟುಬಿಡಿ ಎಂದು ಜಗನ್ನಾಥ್ ಶೆಟ್ಟಿ ಕಾಲಿಗೆ ಬಿದ್ದಿದ್ದಾನೆ. ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.
ಮಂಗಳೂರಿಗೆ ತೆರಳಲು ಆ ದಿನ ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಮೈಸೂರಿಗೆ ಡ್ರಾಪ್ ಕೊಡೋದಾಗಿ ನಾಲ್ವರು ಕಾರಿನಲ್ಲಿ ಕರೆದೊಯ್ದು ಡ್ರಾಪ್ ಕೊಡುವ ನೆಪದಲ್ಲಿ ಕಿಡ್ನಾಪ್ ಮಾಡಿ ಲಾಡ್ಜ್ ಗೆ ಕರೆದೋಯ್ದು ಯುವತಿ ಬಿಟ್ಟು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಬಳಿಕ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಜಗನ್ನಾಥ್ ಶೆಟ್ಟಿ ಈ ಹಿಂದೆ ದೂರು ನೀಡಿದ್ದರು.
ಆರಂಭದಲ್ಲಿ ಆರೋಪಿ ಗ್ಯಾಂಗ್ 4 ಕೋಟಿಗೆ ಬೇಡಿಕೆ ಇಟ್ಟಿತ್ತು. ಆನಂತರ 50 ಲಕ್ಷ ವಸೂಲಿ ಮಾಡಿದೆ. 50 ಲಕ್ಷ ಹಣ ಕೊಟ್ಟು ಹೊರ ಬಂದ ಬಳಿಕ ಹಣಕ್ಕಾಗಿ ಗ್ಯಾಂಗ್ ಮತ್ತೆ ಬೇಡಿಕೆ ಇಟ್ಟಿದ್ದಲ್ಲದೇ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದೆ. ಎಂದು ಜಗನ್ನಾಥ್ ಶೆಟ್ಟಿ ಅವರು 6 ತಿಂಗಳ ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬಾಕೆಯನ್ನು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದರು.