ಮಂಗ್ಲಿ ವಿರುದ್ಧ ದಾಖಲಾಯ್ತು ದೂರು – ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದ ಬಿಜೆಪಿ ಕಾರ್ಪೊರೇಟರ್
“ಕಣ್ಣೇ ಅದಿರಿಂದಿ” ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ಹಾಡು ಹಾಡಿ ತೆಲುಗು ಅಷ್ಟೇ ಅಲ್ಲ ಕನ್ನಡಿಗರ ಹೃದಯ ಗೆದ್ದ ಮಂಗ್ಲಿ ವಿರುದ್ಧ ಇದೀಗ ಬಿಜೆಪಿಗರು ಕೇಸ್ ದಾಖಲಿಸಿದ್ದಾರೆ.. ‘ರಾಬರ್ಟ್’ ಸಿನಿಮಾದ ಹಾಡಿನಿಂದಾಗಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಮಂಗ್ಲಿ ಸ್ಟೇಜ್ ಮೇಲೆ ಲೈವ್ ಆಗಿ ಹಾಡು ಹಾಡಿದ್ದ ವಿಡಿಯೋಗಳಂತು ಸಖತ್ ವೈರಲ್ ಆಗಿತ್ತು.. ಇದ್ರಿಂದ ಮಂಗ್ಲಿಗೆ ಹೈಪ್ ಸಿಕ್ಕಿತ್ತು.. ಜಾನಪದ ಶೈಲಿಯ ಮಂಗ್ಲಿ ಧ್ವನಿಗೆ ಜನ ಫಿದಾ ಆಗಿದ್ದರು.. ಮಂಗ್ಲಿ ಇತ್ತೀಚೆಗಷ್ಟೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ಆದ್ರೆ ಈ ಹಾಡು ಈಗ ವಿವಾದಕ್ಕೆ ಕಾರಣವಾಗಿದ್ದು, ಇದೇ ಹಾಡಿನ ಕಾರಣಕ್ಕೆ ರಚ್ಚಕೊಂಡದ ಮಲ್ಕಜ್ ಗಿರಿ ಬಿಜೆಪಿ ಕಾರ್ಪೊರೇಟರ್ ಮಂಗ್ಲಿ ವಿರುದ್ಧ ದೂರು ದಾಖಲಿಸಿದ್ದಾರೆ.
ಬೊನಾಲ ಹಬ್ಬಕ್ಕೆ ತಕ್ಕಂತೆ ಮಂಗ್ಲಿ ‘ಬೋನಂ ಪಾಟ’ ಎಂಬ ಹಾಡನ್ನು ಖುದ್ದು ಹಾಡಿ, ಅಭಿನಯಿಸಿ ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಗ್ರಾಮ ದೇವತೆ ಮೈಸಮ್ಮನಿಗೆ ಅಪಮಾನ ಮಾಡಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಮರದ ಕೆಳಗೆ ಸಂಬಂಧಿಗಳ ಹಾಗೆ ಕುಳಿತಿದ್ದೀಯ, ನಾವು ಹರಕೆಗಳನ್ನು ಮಾಡಿ ಪೂಜಿಸಿದರೂ ನೀನು ವರವನ್ನು ಕೊಡುತ್ತಿಲ್ಲ, ಬೊಂಬೆಯಂತೆ ಅಲುಗದೇ ಇದ್ದೀಯ, ನಿನ್ನ ಕರ್ತವ್ಯ ಮರೆತಿದ್ದೀಯ ಎಂಬುವಂತಹ ಕೆಲ ಆಕ್ಷೇಪಣೀಯ ಸಾಲುಗಳು ಹಾಡಿನಲ್ಲಿವೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಗಾಯಕಿ ಮಂಗ್ಲಿ ವಿರುದ್ಧ ದೂರು ನೀಡಿರುವ ಬಿಜೆಪಿ ಕಾರ್ಪೊರೇಟರ್ , ಮಂಗ್ಲಿ ಬಿಡುಗಡೆ ಮಾಡಿರುವ ಹಾಡಿನಲ್ಲಿ ಹಿಂದೂ ದೇವತೆಯನ್ನು ಬೈದಿದ್ದಾರೆ. ಆ ಹಾಡು ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ. ಹಾಗಾಗಿ ಈ ಕೂಡಲೇ ಮಂಗ್ಲಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೂ ಮಂಗ್ಲಿ ಹಾಡು ಹಾಗೂ ಅವರ ಮೇಲೆ ಹೊರಿಸಲಾಗಿರುವ ಆರೋಪಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿದೆ.