ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ, ಮಾಣಿಕ್ಷಾ ಪರೇಡ್ ಮೈದಾನದಲ್ಲಿ ಪರೇಡ್ ನಡೆಸಲು ಸಕಲ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಕೊರೊನಾ ಆತಂಕದ ನಡುವೆ ಈ ಬಾರಿ ಸರಳವಾಗಿ ಸ್ಯಾಂತಂತ್ರ್ಯೋತ್ಸವವನ್ನು ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಅದರಂತೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮುಂಜಾನೆಯಿಂದಲೇ ಮೈದಾನದಲ್ಲಿ ತಾಲೀಮು ಆರಂಭವಾಗಿದೆ. ಇನ್ನೂ ತಾಲೀಮು ವೀಕ್ಷಣೆಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಅವರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಸಾಥ್ ನೀಡಿದ್ದರು.
ಬಳಿಕ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಮಲ್ ಪಂಥ್ ಅವರು ಈ ವರ್ಷ ಯಾವುದೇ ರೀತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದಿಲ್ಲ. ಸಾರ್ವಜನಿಕರಿಗೆ ಪ್ರವೇಶವಿಲ್ಲ. ಸರಳವಾಗಿ ಸ್ವತಂತ್ರ ದಿನಾಚರಣೆ ಆಚರಿಸಲಾಗುತ್ತದೆ. ಧ್ವಜಾರೋಹಣವನ್ನು ಸಿಎಂ ಬಿಎಸ್ವೈ ನೆರವೇರಿಸಲಿದ್ದಾರೆ. 45 ನಿಮಿಷದ ಒಳಗೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ ಎಂದು ಕಮಲ್ ಪಂಥ್ ಅವರು ತಿಳಿಸಿದ್ದಾರೆ.








