ಇಂಗ್ಲೆಂಡ್ – ಪಾಕ್ ಫಸ್ಟ್ ಟೆಸ್ಟ್ ನಲ್ಲಿ ಮಗನಿಗೆ ದಂಡ ವಿಧಿಸಿದ್ದ ಅಪ್ಪ.. ನಿಯಮ ಎಲ್ಲರಿಗೂ ಒಂದೇ…!
ಮ್ಯಾಂಚೆಸ್ಟರ್ ನಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ. ಈ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಗೆ ಈಗ ಆಘಾತವಾಗಿದೆ. ಪಂದ್ಯದ ವೇಳೆ ಅಸಂಬದ್ಧ ಪದ ಬಳಕೆ ಮಾಡಿದ್ದ ಕಾರಣಕ್ಕಾಗಿ ಸ್ಟುವರ್ಟ್ ಬ್ರಾಡ್ ಅವರಿಗೆ ದಂಡ ವಿಧಿಸಲಾಗಿದೆ. ಪಂದ್ಯ ಶೇ.15ರಷ್ಟು ಹಣವನ್ನು ದಂಡದ ರೂಪದಲ್ಲಿ ಬ್ರಾಡ್ ನೀಡಬೇಕಿದೆ.
ಅಂದ ಹಾಗೇ ಈ ದಂಡ ವಿಧಿಸಿರುವುದು ಬೇರೆ ಯಾರು ಅಲ್ಲ. ಸ್ಟುವರ್ಟ್ ಬ್ರಾಡ್ ಅವರ ತಂದೆ ಹಾಗೂ ಮ್ಯಾಚ್ ರೆಫ್ರಿಯಾಗಿರುವ ಕ್ರಿಸ್ ಬ್ರಾಡ್. ಆಕಸ್ಮಿಕವೋ ಎಂಬಂತೆ ಈ ಪಂದ್ಯಕ್ಕೆ ಕ್ರಿಸ್ ಬ್ರಾಡ್ ಅವರು ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಫೀಲ್ಡ್ ಅಂಪೈರ್ ಗಳು ನೀಡಿರುವ ದೂರಿನ ಅನ್ವಯ ಕ್ರಿಸ್ ಬ್ರಾಡ್ ಸ್ಟುವರ್ಟ್ ಬ್ರಾಡ್ ಅವರಿಗೆ ದಂಡ ವಿಧಿಸಿದ್ದಾರೆ. ಇಲ್ಲಿ ಮಗನೆಂಬ ಮಮಕಾರದ ಮುಂದೆ ಕ್ರಿಕೆಟ್ ನಿಯಮವೇ ಮುಖ್ಯ ಎಂಬುದನ್ನು ಕ್ರಿಸ್ ಬ್ರಾಡ್ ಈ ಮೂಲಕ ಸಾಬೀತುಪಡಿಸಿದ್ದಾರೆ. ಪಂದ್ಯದಲ್ಲಿ ಅನುಚಿತ ವರ್ತನೆ ಮಾಡಿದ್ರೆ ಮಗನಾದ್ರೂ ಸರಿ, ಶ್ರೇಷ್ಠ ಆಟಗಾರರನಾದ್ರೂ ಸರಿ.. ಶಿಕ್ಷೆಯನ್ನು ಅನುಭವಿಸಲೇಬೇಕು.
ಅಷ್ಟಕ್ಕೂ ಸ್ಟುವರ್ಟ್ ಬ್ರಾಡ್ ಮಾಡಿದ್ದ ತಪ್ಪಾದ್ರೂ ಏನು ? ಪಾಕ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ನಡೆದಿರುವ ಘಟನೆ ಇದು. 46ನೇ ಓವರ್ ನಲ್ಲಿ ಸ್ಟುವರ್ಟ್ ಬ್ರಾಡ್ ಪಾಕಿಸ್ತಾನ ಯಾಸೀರ್ ಶಾಹ ವಿರುದ್ಧ ಅಸಂಬದ್ಧ ಪದ ಬಳಕೆ ಮಾಡಿದ್ದರು. ಯಾಸೀರ್ ಶಾಹಾ ಅವರ ವಿಕೆಟ್ ಉರುಳಿಸಿದ್ದ ಖುಷಿಯಲ್ಲಿ ಸ್ಟುವರ್ಟ್ ಬ್ರಾಡ್ ಅನುಚಿತವಾಗಿ ಪದ ಬಳಕೆ ಮಾಡಿ ಸಂಭ್ರಮ ಪಟ್ಟಿದ್ದರು. ಇದು ಐಸಿಸಿ ನಿಯಮದ ಪ್ರಕಾರ ಆರ್ಟಿಕಲ್ 2.5 ರ ಉಲ್ಲಂಘನೆ ಮಾಡಿದ್ದಂತಾಗಿದೆ.
ಅಂದ ಹಾಗೇ ಸ್ಟುವರ್ಟ್ ಬ್ರಾಡ್ ಈ ರೀತಿ ದಂಡಕ್ಕೆ ಗುರಿಯಾಗಿದ್ದು ಇದೇನೂ ಮೊದಲಲ್ಲ. ಕಳೆದ ಜನವರಿ 27ರಂದು ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲೂ ದಂಡ ಕಟ್ಟಿದ್ದರು. ಅದೇ ರೀತಿ 2018, ಆಗಸ್ಟ್ 19ರಂದು ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ಸ್ಟುವರ್ಟ್ ಬ್ರಾಡ್ ದಂಡನೆಗೆ ಒಳಗಾಗಿದ್ದರು.








