ಐಪಿಎಲ್ ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ವೇಗಿ ಮಯಾಂಕ್ ಯಾದವ್ ಬೆಂಕಿ ಬೌಲಿಂಗ್ ಮಾಡಿ, ತನ್ನ ದಾಖಲೆಯನ್ನು ತಾನೇ ಮುರಿದಿದ್ದಾರೆ.
4 ಓವರ್ ಎಸೆದ ಮಯಾಂಕ್ ಯಾದವ್ ಕೇವಲ 14 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್ ವೆಲ್, ಕ್ಯಾಮರೋನ್ ಗ್ರೀನ್ ಹಾಗೂ ರಜತ್ ಪಾಟಿದಾರ್ ವಿಕೆಟ್ ಕೆಡವಿದ್ದಾರೆ. ಕ್ಯಾಮರೋನ್ ಗ್ರೀನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಸಂಚಲನ ಸೃಷ್ಟಿಸಿದ್ದರು. 8ನೇ ಓವರ್ ನ 4ನೇ ಎಸೆತವನ್ನು ಗ್ರೀನ್ ಗುರುತಿಸುವಷ್ಟರಲ್ಲಿ ವಿಕೆಟ್ ಬಿದ್ದಿತ್ತು. ಆ ಎಸೆತದ ವೇಗ ಬರೋಬ್ಬರಿ 156.7 kmph. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆಯನ್ನು ಮಯಾಂಕ್ ಯಾದವ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ 155.8 kmph ವೇಗದಲ್ಲಿ ಚೆಂಡೆಸೆದಿದ್ದರು. ಸದ್ಯ 156.7 kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಚೆಂಡೆಸೆದ 4ನೇ ಬೌಲರ್ ಎನಿಸಿಕೊಂಡಿದ್ದಾರೆ.
ಐಪಿಎಲ್ ನಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಟೈಟ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 157.71 Kmph ವೇಗದಲ್ಲಿ ಚೆಂಡೆಸೆದಿದ್ದರು. ಎರಡನೇ ಪಂದ್ಯದ ಮೂಲಕ 156.7 kmph ವೇಗವನ್ನು ತಲುಪಿರುವ 21 ವರ್ಷದ ಯುವ ವೇಗಿ ಮಯಾಂಕ್ ಯಾದವ್, ಮುಂದೆ ಯಾವ ದಾಖಲೆ ಮಾಡುತ್ತಾರೆ ಕಾಯ್ದು ನೋಡಬೇಕಿದೆ.