ಚೀನಾ ಮಂದೆ ಭಾರಿ ಬೆಲೆ ತೆರಬೇಕಾಗಿದೆ ಎಂದು ಎಚ್ಚರಿಕೆ ಕೊಟ್ಟ ಸೇನಾ ತಜ್ಞರು
ಹೊಸದಿಲ್ಲಿ, ಜೂನ್ 28: ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ ಚೀನಾ ಬೇರೆ ಬೇರೆ ದೇಶಗಳ ಭೂಭಾಗವನ್ನು ಕಬಳಿಸಲು ನೋಡುವ ಮೂಲಕ ನೆರೆ ರಾಷ್ಟ್ರಗಳ ಜೊತೆಗೆ ತಿಕ್ಕಾಟಕ್ಕೆ ನಿಂತಿದೆ. ಅಷ್ಟೇ ಅಲ್ಲ ಲಡಾಖ್ ಗಡಿ ಪ್ರದೇಶದಲ್ಲಿ ಭಾರತದ ಸೇನೆಯ ವಿರುದ್ಧ ದಾಳಿ ನಡೆಸಿ 20 ಮಂದಿ ಯೋಧರ ಹತ್ಯೆ ಮಾಡಿತು. ಇದಕ್ಕೆಲ್ಲ ಚೀನಾ ಮುಂದಿನ ದಶಕಗಳ ಕಾಲ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸೇನಾ ತಜ್ಞರು ಚೀನಾಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಈಗಾಗಲೇ ಕೊರೊನಾ ವೈರಸ್ ಚೀನಾದ ಸೃಷ್ಟಿ ಎಂದು ಆರೋಪಿಸಿರುವ ಅಮೆರಿಕ ಚೀನಾವನ್ನು ರಕ್ಕಸ ರಾಷ್ಟ್ರ ಎಂದು ಜರೆದಿದೆ. ನೆರೆರಾಷ್ಟ್ರಗಳ ಜೊತೆ ಕಾಲು ಕೆರೆದು ಜಗಳಕ್ಕೆ ನಿಂತಿರುವ ಚೀನಾ ಹಾಂಕಾಂಗ್ ರಾಜಕೀಯದಲ್ಲೂ ಮೂಗು ತೂರಿಸುತ್ತಿದೆ.
ಇಡೀ ಪ್ರಪಂಚವೇ ಕೊರೊನಾ ವಿರುದ್ಧ ಸಮರದಲ್ಲಿ ನಿರತವಾಗಿರುವ ಸಮಯದಲ್ಲಿ ಚೀನಾ ಮಾತ್ರ ಪೂರ್ವ ಲಡಾಖ್ ಮತ್ತು ದಕ್ಷಿಣ ಚೀನಾದಲ್ಲಿ ಕಳೆದೆರಡು ತಿಂಗಳಿಂದ ಭಾರಿ ದೊಡ್ಡ ಪ್ರಮಾಣದಲ್ಲಿ ಹಣವನ್ನು ವ್ಯಯಿಸಿದೆ. ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಹೆಸರು ಕೆಡಿಸಿಕೊಂಡಿರುವ ಚೀನಾದ ಜೊತೆಗೆ ಈಗಾಗಲೇ ಅಮೆರಿಕ ಮತ್ತು ಆಸ್ಟ್ರೇಲಿಯಾ ವಾಣಿಜ್ಯ ಸಮರವನ್ನು ಸಾರಿದೆ.
ಇದೀಗ ಲಡಾಖ್ ನಲ್ಲಿ ಭಾರತೀಯ ಸೇನೆಯ ಮೇಲೆ ಆಕ್ರಮಣ ಮಾಡುವ ಮೂಲಕ ಚೀನಾ ತನ್ನ ನೈಜ ಮುಖವನ್ನು ಜಗತ್ತಿನ ಮುಂದೆ ಬಹಿರಂಗ ಪಡಿಸಿಕೊಂಡಿದೆ.
ಅಷ್ಟೇ ಅಲ್ಲ ಭಾರತ ಮತ್ತು ವಿಶ್ವದ ಕೆಲ ರಾಷ್ಟ್ರಗಳೊಂದಿಗೆ ತನ್ನ ಸ್ನೇಹವನ್ನು ಕೆಡಿಸಿಕೊಂಡಿದೆ. ಇದೆಲ್ಲಾ ಮುಂದಿನ ದಿನಗಳಲ್ಲಿ ಚೀನಾವನ್ನು ವಿಶ್ವದಲ್ಲೇ ಒಂಟಿಯನ್ನಾಗಿಸಲಿದ್ದು, ಹಲವು ದಶಕಗಳ ಕಾಲ ಚೀನಾ ಇದಕ್ಕೆಲ್ಲ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಸೇನಾಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಹೇಳಿದ್ದಾರೆ.