ಬೆಂಗಳೂರು : ಸರ್ಕಾರಕ್ಕೆ ನೀಡಿದ್ದ ಸಹಕಾರ ಕಾಲಾವಕಾಶ ಮುಗಿದಿದೆ. ಬಡವರಿಗೆ ಅಕ್ಕಿಯಿಂದ ಹಿಡಿದು, ಹಾಲು, ತರಕಾರಿ, ದಿನಸಿ ಹಂಚಿಕೆವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇನ್ನೇನಿದ್ದರೂ ನಾವು ಸರ್ಕಾರದ ವೈಫಲ್ಯಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಕಳೆದ ಒಂದು ತಿಂಗಳಿಂದ ಸಂಕಷ್ಟದ ಸಮಯದಲ್ಲಿ ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದೇವೆ. ರಾಜಕಾರಣ ಮಾಡಬಾರದು ಹಾಗೂ ಮಾನವೀಯತೆ ದೃಷ್ಟಿಯಿಂದ ನಾವು ಸರ್ಕಾರದ ಜತೆ ಕೈ ಜೋಡಿಸಿದ್ದೇವೆ. ಕಳೆದ 40 ದಿನಗಳಲ್ಲಿ ಸರ್ಕಾರ ಏನು ಮಾಡಿದೆ ಎಂಬುದನ್ನು ನೀವೆಲ್ಲ ನೋಡಿದ್ದೀರಿ. ಸಚಿವರುಗಳ ನಡುವೆ ಸಮನ್ವಯತೆ, ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಪ್ರತಿ ವಿಚಾರದಲ್ಲೂ ದಂಧೆ ನಡೆಯುತ್ತಿದೆ. ಇದನ್ನು ನೋಡಿಕೊಂಡು ಕೂರಲು ಇನ್ನು ಸಾಧ್ಯವಿಲ್ಲ ಎಂದು ಗುಡುಗಿದರು.
ಇನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜನರಿಗೆ ಏನು ಆಶ್ವಾಸನೆ ಕೊಟ್ಟರೋ ಅದರಲ್ಲಿ ಒಂದೇ ಒಂದೂ ಕಾರ್ಯ ರೂಪಕ್ಕೆ ಬಂದಿಲ್ಲ. ಆಹಾರ ವಿತರಣೆಯಲ್ಲಿ ಶೇ.20 ರಷ್ಟು ಕೆಲಸ ಆಗಿರೋದು ಬಿಟ್ಟರೆ, ಆರೋಗ್ಯ ವಿಷಯದಿಂದ ಹಿಡಿದು ಕಾರ್ಮಿಕರ ಸಮಸ್ಯೆವರೆಗೂ ಎಲ್ಲೂ ಕೆಲಸ ಆಗಿಲ್ಲ ಎಂದು ದೂರಿದರು.
ಕೊರೊನಾ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇರಲಿ, ಜೆಡಿಎಸ್ ಇರಲಿ ಇತರೆ ಸಂಘಟನೆಗಳಿರಲಿ ಎಲ್ಲವೂ ಸ್ವಹಿತಾಸಕ್ತಿ ಮರೆತು ರಸ್ತೆಗಿಳಿದು ಜನರಿಗೆ ಸಹಾಯ ಮಾಡಿವೆ. ಶಕ್ತಿ ಮೀರಿ ಜನಪರವಾಗಿ ಶ್ರಮಿಸಿವೆ. ಈ ವಿಚಾರದಲ್ಲಿ ನಾವು ರಾಜಕಾರಣವನ್ನು ದೂರವಿಟ್ಟೆವು. ಆದರೆ ಈಗ ಸಮಯ ಮೀರುತ್ತಿದೆ. ಇನ್ನು ನಾವು ಸುಮ್ಮನೇ ಕೂತರೆ ಜನರಿಗೆ, ನಮ್ಮ ಜವಾಬ್ದಾರಿಗೆ ಮೋಸ ಮಾಡಿದಂತಾಗುತ್ತದೆ. ಹಾಲು ಕೊಡ್ರಿ ಅಂದ್ರೆ ಅದರಲ್ಲೂ ವ್ಯಾಪಾರ. ಅಕ್ಕಿ ಕೊಡುವುದರಲ್ಲೂ ಅವ್ಯವಹಾರ. ಈವರೆಗೂ ಸರ್ಕಾರ ಒಂದೇ ಒಂದು ಕಡೆ ತರಕಾರಿಗಳನ್ನು ಖರೀದಿ ಮಾಡಿರುವ ದಾಖಲೆ ನಿಮ್ಮ ಬಳಿ ಇದ್ದರೆ ಕೊಡಿ ಎಂದು ಕಿಡಿಕಾರಿದರು.