Minister Dr. K. Sudhakar | 1 ಕೋಟಿ ಆಯುಷ್ಮಾನ್ ಕಾರ್ಡ್ ವಿತರಣೆಯ ಗುರಿ
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು 35 ಲಕ್ಷ ಜನರಿಗೆ ನೀಡಲಾಗಿದೆ. ಇನ್ನೂ 65 ಲಕ್ಷದಷ್ಟು ಕಾರ್ಡ್‌ಗಳನ್ನು ನೀಡಿ 1 ಕೋಟಿಯ ಗುರಿಯನ್ನು ತಲುಪಬೇಕು. ದೇಶದಲ್ಲಿ ಕರ್ನಾಟಕವೇ 1 ಕೋಟಿಯ ಗುರಿಯನ್ನು ಮೊದಲು ತಲುಪಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.
ಪ್ರತಿ ದಿನ ಮಾಡುವ ಕೆಲಸಗಳೇ ಆರೋಗ್ಯ ರಕ್ಷಣೆಗೆ ಸಾಕು ಎಂಬ ತಪ್ಪು ಭಾವನೆ ಜನರಲ್ಲಿದೆ. ಆದ್ದರಿಂದ ಯೋಗ, ಧ್ಯಾನ, ಪ್ರಾಣಾಯಾಮದ ಬಗ್ಗೆಯೂ ಈ ಅಭಿಯಾನದಲ್ಲಿ ಒತ್ತು ನೀಡಬೇಕು. ಇದಕ್ಕಾಗಿ ಯೋಗ ಸಂಸ್ಥೆಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳ ಸಹಕಾರ ಪಡೆಯಬಹುದು. ಮಾತೃ ಮರಣ, ಶಿಶು ಮರಣ ಇಳಿಕೆಗೂ ಈ ಅಭಿಯಾನದಲ್ಲಿ ಗಮನಹರಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ರಕ್ತದಾನ, ಕ್ಷಯಮುಕ್ತ ಅಭಿಯಾನ
ಪ್ರತಿ ಆರೋಗ್ಯ ಕೇಂದ್ರಗಳಿಗೆ ಈ ಹದಿನೈದು ದಿನಗಳಲ್ಲಿ ಒಂದು ಗುರಿಯನ್ನು ನೀಡಿ ರಕ್ತ ಸಂಗ್ರಹ ಮಾಡಬೇಕು. ಹಾಗೆಯೇ ಅಂಗಾಂಗಗಳ ದಾನಕ್ಕೆ ಹೆಸರು ನೋಂದಾಯಿಸುವ ಚಟುವಟಿಕೆ ನಡೆಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿ 248 ರಕ್ತನಿಧಿ ಕೇಂದ್ರಗಳಿದ್ದು, ಇವುಗಳಿಗೆ ಸೂಚನೆ ನೀಡಿ ರಕ್ತ ಸಂಗ್ರಹ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಇದೇ ರೀತಿ ಕ್ಷಯ ಮುಕ್ತ ಅಭಿಯಾನದ ಬಗ್ಗೆಯೂ ಅರಿವು ಮೂಡಿಸಲಾಗುವುದು ಎಂದರು.
ಡೆತ್ ಆಡಿಟ್‌ಗೆ ಸೂಚನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಮಾತೃ ಮರಣದ ಕುರಿತು ಡೆತ್ ಆಡಿಟ್ ನಡೆಸಬೇಕು. ಹಾಗೆಯೇ ಪ್ರತಿ ಆಸ್ಪತ್ರೆಗಳಲ್ಲಿ ಪ್ರತಿ ಮರಣದ ಬಗ್ಗೆಯೂ ಡೆತ್ ಆಡಿಟ್ ಮಾಡುವ ಕ್ರಮ ಜಾರಿ ಮಾಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.