ಸಚಿವರ ಕಾರ್ ಓವರ್ ಟೇಕ್ ಮಾಡಿದ್ದಕ್ಕೆ 5 ಗಂಟೆ ಠಾಣೆಯಲ್ಲಿ ಕುಳಿತ ಚಾಲಕರು
ನವದೆಹಲಿ : ಎಂಎಸ್ ಎಂಇ ರಾಜ್ಯ ಮಂತ್ರಿ ಪ್ರತಾಪ್ ಚಂದ್ರ ಸಾರಂಗಿ ಅವರ ಕಾರ್ ಓವರ್ ಟೇಕ್ ಮಾಡಿ ಚಾಲಕರಿಬ್ಬರನ್ನು ಐದು ಗಂಟೆ ಕಾಲ ಠಾಣೆಯಲ್ಲಿರಿಸಿ ದಂಡ ವಿಧಿಸಲಾಗಿದೆ.
ಹೌದು..! ಓಡಿಶಾದ ರಾಷ್ಟ್ರೀಯ ಹೆದ್ದಾರಿ 16 ರಲ್ಲಿ ಸಚಿವ ಸಾರಂಗಿ ಪ್ರಯಾಣಿಸುತ್ತಿದ್ದ ಮಾರ್ಗದಲ್ಲಿ ಕೊಲ್ಕತ್ತಾ ಮೂಲದ ಸಂತೋಷ್ ತಮ್ಮ ಕುಟುಂಬದೊಂದಿಗೆ ಪಂಚಲಿಂಗೇಶ್ವರ ಕ್ಷೇತ್ರಕ್ಕೆ ಎರಡು ಕಾರುಗಳಲ್ಲಿ ತೆರಳುತ್ತಿದ್ದರು.
ಆ ಕಾರುಗಳು ಹೆದ್ದಾರಿ ಪ್ರವೇಶಿಸುತ್ತಿದ್ದಂತೆ ಎಸ್ಕಾರ್ಟ್ ಸಿಬ್ಬಂದಿ ಹಾರ್ನ್ ಮಾಡಿದ್ದಾರೆ. ಇದನ್ನ ಕೇಳದ ಸಂತೋಷ್ ಸಚಿವರ ಕಾರ್ ಗಳನ್ನು ಓವರ್ ಟೇಕ್ ಮಾಡಿ ಮುಂದೆ ಸಾಗಿದ್ದಾರೆ.
ಇದಾದ ಬಳಿಕ ಎಸ್ಕಾರ್ಟ್ ಸಿಬ್ಬಂದಿ ಸುಮಾರು 20 ಕಿಲೋ ಮೀಟರ್ ಸಂತೋಷ್ ಕಾರುಗಳನ್ನು ಹಿಂಬಾಲಿಸಿ ತಡೆದಿದ್ದಾರೆ. ನಂತರ ಕಾರ್ ಚಾಲಕರಿಬ್ಬರನ್ನೂ ಐದು ಗಂಟೆ ಠಾಣೆಯಲ್ಲಿರಿಸಿ ದಂಡ ವಿಧಿಸಿ ಕಳುಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್, ಸಚಿವರ ಕಾರ್ ಓವರ್ ಟೇಕ್ ಮಾಡೋದು ತಪ್ಪು ಅಂತಾ ನಮಗೆ ತಿಳಿದಿರಲಿಲ್ಲ. ಪೊಲೀಸರು ಪಿಆರ್ ಬಾಂಡ್ ನಲ್ಲಿ ನಮ್ಮ ಸಹಿ ತೆಗೆದು ದಂಡ ತೆಗೆದುಕೊಂಡಿದ್ದಾರೆ ಅಂತಾ ಬೇಸರ ಹೊರಹಾಕಿದ್ದಾರೆ.
