ಬೀದಿ ನಾಯಿಗಳಿಗೆ ಬಿರಿಯಾನಿ ಹಂಚುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಹಣ ಲೂಟಿ’ ಆರೋಪ ಮಾಡಿದ ಬೆನ್ನಲ್ಲೇ, ಕಾರ್ಮಿಕ ಸಚಿವ ಸಂತೋಷ್ ಲಾಡ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿರುವ ಅವರು, “ವಿದೇಶಗಳಿಗೆ ಅತಿ ಹೆಚ್ಚು ಗೋಮಾಂಸ ರಫ್ತು ಮಾಡುತ್ತಿರುವುದು ಭಾರತ. ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೇ ಕೇಳಿ,” ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ನೀಡಿದವರು ಯಾರೆಂದು ತಮಗೆ ತಿಳಿದಿಲ್ಲ ಎಂದು ಹೇಳಿದ ಲಾಡ್, “ಬಿಜೆಪಿ ನಾಯಕರು ಬಿರಿಯಾನಿ ಬಗ್ಗೆ ಪ್ರಶ್ನಿಸುತ್ತಾರೆ. ಆದರೆ, ಭಾರತವು ಅತಿ ಹೆಚ್ಚು ಗೋಮಾಂಸ ರಫ್ತು ಮಾಡುತ್ತಿದೆ. ಅದರಲ್ಲಿಯೂ ಉತ್ತರ ಪ್ರದೇಶದಿಂದ ಅತಿ ಹೆಚ್ಚು ಗೋಮಾಂಸ ಪೂರೈಕೆಯಾಗುತ್ತಿದೆ. ಗೋಮಾತೆ ಜಪ ಮಾಡುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದಕ್ಕೆ ಉತ್ತರಿಸಬೇಕು,” ಎಂದು ಸವಾಲು ಹಾಕಿದ್ದಾರೆ. ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.








