ಗುವಾಹಟಿ : ಲಾಕ್ ಡೌನ್ ನಿಂದಾಗಿ ಬಡವರು ಊಟಕ್ಕಾಗಿ ಪರದಾಡುತ್ತಿದ್ದಾರೆ. ಅಂಥವರಿಗೆ ಅನುಕೂಲ ಆಗಲೆಂದು ಸರ್ಕಾರ ಎಲ್ಲರಿಗೂ ರೇಷನ್ ಹಂಚುತ್ತಿದೆ. ಆದ್ರೆ ಕೆಲವುಕಡೆ ಅರ್ಹರಿಗೆ ಅಕ್ಕಿ, ಬೇಳೆ ಸಿಗದೇ ಪರದಾಡುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ.
ಈ ನಡುವೆಯೇ, ಅಕ್ಕಿ ಖಾಲಿಯಾಗಿದೆ ಎಂದು ಗುವಾಹಟಿಯ ಒಂದಿಷ್ಟು ಅಪ್ರಾಪ್ತ ವಯಸ್ಸಿನ ಮಕ್ಕಳು ಕಾಳಿಂಗ ಸರ್ಪವನ್ನೇ ತಿಂದಿದ್ದಾರೆ.
ಹೌದು..! ಗುವಾಹಟಿಯ ಅರಣ್ಯ ಪ್ರದೇಶದ ಸಮೀಪ ವಾಸಿಸುತ್ತಿರುವ ಮಕ್ಕಳು ಬೇಟೆಯಲ್ಲಿ ನಿಸ್ಸೀಮರು. ಅಲ್ಲಿ ಈಗ ಸ್ಥಳೀಯ ಹಬ್ಬವಂತೆ. ಈ ಹಬ್ಬಕ್ಕೆ ಏನಾದರೂ ಭರ್ಜರಿ ಊಟ ಮಾಡುವ ಆಸೆ ಅವರದ್ದು. ಆದರೆ ಅವರೇ ಹೇಳುವಂತೆ ಲಾಕ್‌ಡೌನ್‌ನಿಂದಾಗಿ ಅಕ್ಕಿ ಖಾಲಿಯಾಗಿದೆಯಂತೆ. ‘ಮನೆಯಲ್ಲಿ ಅಕ್ಕಿ ಖಾಲಿಯಾಗಿತ್ತು. ಲಾಕ್‌ಡೌನ್‌ನಿಂದಾಗಿ ಎಲ್ಲಿಯೂ ಸದ್ಯ ಅಕ್ಕಿ ಸಿಗುವಂತಿರಲಿಲ್ಲ. ಇಲ್ಲಿ ಹಬ್ಬ ಬೇರೆ. ಹೊಟ್ಟೆ ಹಸಿದ ಕಾರಣ, ಕಾಡಿನಲ್ಲಿ ಏನಾದರೂ ಸಿಗುತ್ತದೆ ಎಂದು ಹುಡುಕುತ್ತಾ ಹೊರಟೆವು. ಆಗ ಈ ಹಾವು ಕಣ್ಣಿಗೆ ಬಿತ್ತು. ಅದನ್ನೇ ತಂದು ತಿಂದಿದ್ದೇವೆ’ ಎಂದಿದ್ದಾರೆ.
ಮೂವರು ಮಕ್ಕಳು ಕಾಳಿಂಗ ಸರ್ಪವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ನಂತರ ಅದನ್ನು ಕೊಂದಿದ್ದಾರೆ. ಬಾಳೆಯ ಎಲೆಯ ಮೇಲೆ ಅದನ್ನಿಟ್ಟು ಪೀಸ್ ಪೀಸ್ ಮಾಡಿ ತಿಂದು ಹಬ್ಬದೂಟ ಮಾಡಿದ್ದಾರೆ! ಅಲ್ಲಿರುವ ಇನ್ನು ಕೆಲವರೂ ಈ ಕಾಳಿಂಗ ಸರ್ಪವನ್ನು ತಿಂದು ಬಾಯಿ ಚಪ್ಪರಿಸಿದ್ದಾರೆ.
ಕಾಳಿಂಗ ಸರ್ಪವನ್ನು ತಿಂದು ಹಬ್ಬ ಮಾಡಿರುವ ವೀಡಿಯೋ ಮಾಡಲಾಗಿದ್ದು, ಅದೀಗ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಪೊಲೀಸರು ಈ ಯುವಕರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಹಸಿವನ್ನು ನೀಗಿಸಿಕೊಳ್ಳಲು ಬೇರೆ ದಾರಿ ಇರಲಿಲ್ಲ, ಅದಕ್ಕಾಗಿ ಹೀಗೆ ಮಾಡಿದ್ದೇವೆ, ನಮ್ಮನ್ನು ಬಿಟ್ಟುಬಿಡಿ ಎಂದು ಸ್ಥಳೀಯರು ಕೇಳಿಕೊಂಡಿದ್ದಾರೆ. ಆದರೆ ಕಾನೂನಿನ ಅಡಿ ಇದು ಅಪರಾಧವಾಗಿರುವ ಕಾರಣ, ಹಬ್ಬದೂಟ ಮಾಡಿದವರು ಪೊಲೀಸರ ಅತಿಥಿಗಳಾಗಿದ್ದಾರೆ.








