ಬೆಂಗಳೂರು, ಮೇ 18: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ರಾಜೀನಾಮೆ ಸಲ್ಲಿಸಿದ್ದ ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಅಣ್ಣಾಮಲೈ 2021ರ ಏಪ್ರಿಲ್ ನಲ್ಲಿ ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ತಮಿಳುನಾಡಿನಲ್ಲಿರುವ ತಮ್ಮ ಊರಿನಲ್ಲಿ ಕೆಲಸ ಪ್ರಾರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಭಾನುವಾರ ಸಂಜೆ ಫೇಸ್ ಬುಕ್ ನಲ್ಲಿ ನೇರಪ್ರಸಾರದಲ್ಲಿ (ಲೈವ್) ಮಾತನಾಡಿದ ಅಣ್ಣಾಮಲೈ, ತಮ್ಮ ಭವಿಷ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಮಿಸ್ ಯೂ ಕರ್ನಾಟಕ’ ಎಂದು ಮಾತು ಆರಂಭಿಸಿದ ಅಣ್ಣಾಮಲೈ, ‘ಕರ್ನಾಟಕದ ಜನ ನನಗೆ ಪ್ರೀತಿ ಕೊಟ್ಟಿದ್ದಾರೆ. ಅವರ ಪ್ರೀತಿಗೆ ನಾನು ಸದಾ ಅಭಾರಿ. ನನಗೆ ನನ್ನದೇ ಆದ ಹಲವಾರು ಯೋಜನೆಗಳಿವೆ. ಜನರೊಡನೆ ಇದ್ದು ಕೊಂಡು ರಾಜಕೀಯ ವ್ಯವಸ್ಥೆ ಸುಧಾರಣೆ ಮಾಡುವ ಬಯಕೆ ಇದೆ. ಹಾಗಾಗಿ ನಾನು ರಾಜೀನಾಮೆ ಕೊಟ್ಟು ಸ್ವಂತ ಊರಿಗೆ ಬರಬೇಕಾಯಿತು ಎಂದರು.
ಪೊಲೀಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದೇನೆ. ಅಷ್ಟು ಸಾಕು ನನಗೆ. ನನ್ನ ಆಲೋಚನೆ ಮತ್ತು ಗುರಿ ಬೇರೆಯೇ ಇದೆ. ನನಗೆ ನನ್ನ ಕುಟುಂಬದ ಜೊತೆ ಸಮಯ ಕಳೆಯಬೇಕು ಮತ್ತು ಕೃಷಿ ಮಾಡಬೇಕು. ತಮಿಳುನಾಡು ರಾಜಕೀಯ ಪ್ರವೇಶಿಸಿ ವ್ಯವಸ್ಥೆಯನ್ನು ಬದಲಾಯಿಸಬೇಕು. ದಕ್ಷ ಅಧಿಕಾರಿಗಳಿಗೆ ಉತ್ತಮ ವಾತಾವರಣ ನಿರ್ಮಿಸಬೇಕು ಎಂದೆಲ್ಲಾ ಆಸೆಗಳಿವೆ. ಅದನ್ನು ನನಸಾಗಿಸಲು ಶ್ರಮ ಪಡುತ್ತಿದ್ದೇನೆ ಎಂದು ಅಣ್ಣಾಮಲೈ ಹೇಳಿದರು.
ಮದ್ಯದಂಗಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಣ್ಣಾಮಲೈ ಎಲ್ಲಾ ಸರ್ಕಾರಗಳು ಹಳೇ ಪದ್ಧತಿಯಲ್ಲೇ ಅರ್ಥಿಕ ನಿರ್ವಹಣೆ ನಿಭಾಯಿಸುತ್ತಿದೆ. ಹಾಗಾಗಿ ಮದ್ಯದ ಆದಾಯವನ್ನು ನಂಬಿಕೊಂಡು ಬಜೆಟ್ ತಯಾರಿಸುತ್ತಿವೆ ಎಂದರು. ಕರ್ನಾಟಕದಲ್ಲಿ 21 ಸಾವಿರ ಕೋಟಿ ಆದಾಯ ಮದ್ಯ ದಿಂದಲೇ ಬರುತ್ತದೆ. ಹಾಗಿರುವಾಗ ಯಾವ ಸರ್ಕಾರ ಮದ್ಯದ ಆದಾಯ ಬೇಡ ಎಂದು ಹೇಳುತ್ತದೆ. ಅದು ತಪ್ಪೋ, ಸರಿಯೋ ಹೇಳಲಾಗದು ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟ ತಪ್ಪು, ಮದ್ಯ ದಲ್ಲಿ ಒಳ್ಳೆಯದಕ್ಕಿಂತ ಕೆಟ್ಟದೇ ಜಾಸ್ತಿ ಎಂದರು.
ಸರ್ಕಾರಗಳು ಪ್ರತಿ ವರ್ಷ ಮದ್ಯದ ಆದಾಯ ಹೆಚ್ಚಿಸುವಂತೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರುತ್ತದೆ. ಮದ್ಯದ ಆದಾಯ ಬಿಟ್ಟು ಹೊಸ ಆದಾಯ ಸೃಷ್ಟಿಸುವತ್ತ ಸರ್ಕಾರಗಳು ಗಮನ ಹರಿಸಬೇಕಿದ್ದು, ಅಂತಹ ಒಳ್ಳೆಯ ಚಿಂತನೆಗಾಗಿ ಉತ್ತಮ ಸರ್ಕಾರ ಬೇಕು. ಯುವ ಜನಾಂಗ ರಾಜಕೀಯ ವ್ಯವಸ್ಥೆಯನ್ನು ಸರಿ ಮಾಡಲು ಪ್ರಯತ್ನಿಸಬೇಕು. ಶಾಸಕರು, ಸಂಸದರು ಯಾರು ಆಗಬೇಕೆಂದು ನಿರ್ಧರಿಸಬೇಕು. ಅವರು ಯಾವ ರೀತಿ ಕೆಲಸ ಮಾಡುತ್ತಾರೆ, ಯಾವ ರೀತಿ ಅಸೆಂಬ್ಲಿಯಲ್ಲಿ ಮಾತನಾಡುತ್ತಾರೆ ಎಂದು ನೋಡಬೇಕು ಎಂದರು.
ಎಲ್ಲರೂ ಐಎಎಸ್, ಐಪಿಎಸ್ ಆಗಬೇಕು ಎಂದರೆ ಹೇಗೆ ಆಗುತ್ತದೆ. ಪರೀಕ್ಷೆಯೇ ಬದುಕಲ್ಲ. ಬದುಕು ಬಹಳ ದೊಡ್ಡದಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶಗಳಿವೆ. ಅದನ್ನು ಬಳಸಿಕೊಂಡು ಬೆಳೆದು ಇತರರಿಗೂ ಕೆಲಸ ಕೊಡುವ ಮಟ್ಟಕ್ಕೆ ಬೆಳೆಯಬೇಕು ಎಂದರು.
ಕೆಲಸವೇ ಬದುಕಲ್ಲ, ಸಂಸಾರ, ಕುಟುಂಬ, ಗೆಳೆಯರ ಜೊತೆ ಕೂಡ ಕಾಲ ಕಳೆಯಿರಿ. ಸಾಯುವ ಸಮಯದಲ್ಲಿ ಯಾರಾದರೂ ಸಂತೋಷದ ವಿಷಯ ಯಾವುದು ಎಂದು ಕೇಳಿದರೆ, ತಂದೆ ತಾಯಿ, ಕುಟುಂಬ ಎನ್ನಬೇಕೇ ಹೊರತು ಪರೀಕ್ಷೆ ಎಂದು ಹೇಳುವುದಲ್ಲ ಎಂದರು.
ಯಾವುದೇ ಪರೀಕ್ಷೆ ಗಳನ್ನು ಧೈರ್ಯದಿಂದ, ತಾಳ್ಮೆಯಿಂದ ಎದುರಿಸಬೇಕು. ಪಾಸ್ ಆಗದೆ ಇದ್ದರೆ ನಮಗಾಗಿ ಬೇರೊಂದು ಕ್ಷೇತ್ರ ಕಾಯುತ್ತಿರುತ್ತದೆ. ಸಮಾಜಕ್ಕೆ ಐಎಎಸ್, ಐಪಿಎಸ್ ಅಧಿಕಾರಿ ಹೇಗೆ ಅಗತ್ಯವೋ ಅದೇ ರೀತಿಯಲ್ಲಿ ರೈತರು, ಸಮಾಜ ಕಾರ್ಯಕರ್ತರು, ಉದ್ಯಮಿಗಳು ಬೇಕು. ಹಾಗಾಗಿ ಉದಾರವಾಗಿ ಯೋಚಿಸಿ ಸಾಧನೆ ಮಾಡಿ ಎಂದು ಅಣ್ಣಾಮಲೈ ಹೇಳಿದರು.
ಕೊರೋನಾ ಲಾಕ್ ಡೌನ್ ಅವಧಿ ಮುಗಿದ ಮೇಲೆ ಬೇಗನೆ ಬೆಳೆಯುವ ಕ್ಷೇತ್ರ ಕೃಷಿ. ಕೃಷಿಯೇ ಭಾರತದ ಜೀವಾಳ. ಆದರೆ ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಬೇಕಿದ್ದು, ಸರ್ಕಾರ ರೈತರಿಗೆ ತಂತ್ರಜ್ಞಾನ ತಲುಪಿಸುವ ಕೆಲಸ ಮಾಡಬೇಕು ಎಂದರು.
ನಾವು ಆರಿಸಿ ಕಳುಹಿಸುವ ಜನಪ್ರತಿನಿಧಿಗಳು ಒಂದೇ ರೀತಿ ಇರಬೇಕು. ಹಣ ಇದ್ದವರೇ ಚುನಾವಣೆಗೆ ನಿಲ್ಲುವುದಕ್ಕೆ ಕಡಿವಾಣ ಹಾಕಬೇಕು ಎಂದ ಅಣ್ಣಾಮಲೈ ಜನಪ್ರತಿನಿಧಿಗಳು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುವುದು ಸಹಜ ಎಂದರು








