ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ವೆಂಕಟಪ್ಪ ನಾಯಕ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಸುರಪುರಕ್ಕೆ ಇಂದು ಬೆಳಿಗ್ಗೆ ತರಲಾಗಿತ್ತು. ಸುರಪುರ ಪಟ್ಟಣದಲ್ಲಿನ ವಸಂತ ನಗರದ ದರ್ಬಾರ್ ಹೌಸ್ನಲ್ಲಿ ರಾಜ ಮನೆತನದ ಪ್ರಕಾರ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ರಾಜಾ ವೆಂಕಟಪ್ಪನ ಅಗಲಿಕೆಯಿಂದ ಸಹಸ್ರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅಂತಿಮ ದರ್ಶನ ಪಡೆಯಲು ಸುಮಾರು 35 ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರು. ಹೀಗಾಗಿ ನೂಕು ನುಗ್ಗಲು ಉಂಟಾಗಿ ಪೊಲೀಸರು ಹರಸಾಹಸ ಪಡುವಂತಾಯಿತು.
ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಶರಣಬಸಪ್ಪ ದರ್ಶನಾಪೂರ, ಪ್ರಿಯಾಂಕ್ ಖರ್ಗೆ, ನಾಗೇಂದ್ರ ಸೇರಿದಂತೆ ಹಲವು ಸಚಿವರು, ಶಾಸಕರು ಪಕ್ಷಾತೀತವಾಗಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸರ್ಕಾರಿ ಗೌರವಗಳೊಂದಿಗೆ ರಾಜಾ ವೆಂಕಟಪ್ಪ ನಾಯಕ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು.