ಕೋವಿಡ್ ಆತಂಕ ಕೊಂಚ ಕಡಿಮೆಯೇನೋ ಆಗಿದೆ.. ಆದ್ರೆ ಪ್ರಸ್ತುತ ಜಗತ್ತನ್ನ ಕಾಡಲಾರಂಭಿಸಿರೋದು ಅಂದ್ರೆ ಮಂಕಿಪಾಕ್ಸ್ ಪ್ರಕರಣಗಳು… ಹೌದು.. ಯೂರೋಪಿಯನ್ ಮತ್ತು ಅಮೆರಿಕನ್ ದೇಶಗಳಲ್ಲಿ ಈ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು ಜನರ ನಿದ್ದೆಗೆಡಿಸಿದೆ..
ಇದುವರೆಗೆ ಆಫ್ರಿಕಾದಿಂದ ಹೊರಗೆ ಕಾಣಿಸಿಕೊಳ್ಳುತ್ತಿತ್ತು ಈ ಸೋಂಕು.. ಅದ್ರಲ್ಲೂ ವಿರಳಾತಿ ವಿರಳ.. ಈಗ ತಮ್ಮ ದೇಶಗಳಲ್ಲಿ ಕಾಣಿಸಿಕೊಂಡಿರುವುದು ಆರೋಗ್ಯ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ.
ಯೂರೋಪಿಯನ್ ಮತ್ತು ಅಮೆರಿಕನ್ ದೇಶಗಳಲ್ಲಿ ಇತ್ತೀಚೆಗೆ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಆ ದೇಶಗಳ ಆರೋಗ್ಯ ಅಧಿಕಾರಿಗಳು, ಮಂಕಿಪಾಕ್ಸ್ ಪ್ರಕರಣಗಳ ಬಗ್ಗೆ ನಿಗಾ ಇಡುತ್ತಿದ್ದಾರೆ.
ಪ್ರಸ್ತುತ ಮಂಕಿಪಾಕ್ಸ್ ಆಫ್ರಿಕಾಗೆ ಪ್ರಯಾಣಿಸದ ಜನರಲ್ಲಿ ಕೂಡ ಹರಡುತ್ತಿದೆ, ಅದರಲ್ಲೂ ಮುಖ್ಯವಾಗಿ ಯುವಕರಲ್ಲಿ ಇದು ಹೆಚ್ಚಾಗಿ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಆದರೂ, ಸಾಮಾನ್ಯ ಜನರಿಗೆ ಈ ರೋಗದ ಅಪಾಯ ಕಡಿಮೆ ಇದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಂದ್ಹಾಗೆ ಈ ವೈರಸ್ ರೋಡಂಟ್ಸ್ ಮತ್ತು ಪ್ರೈಮೆಟ್‍ಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ ಮತ್ತು ಸಾಂದರ್ಭಿಕವಾಗಿ ಮನುಷ್ಯರಿಗೆ ಹರಡುತ್ತದೆ ಎಂದು ತಜ್ಞರು ತಿಳಿಸಿದ್ಧಾರೆ. ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಈ ರೋಗ ಮನುಷ್ಯರಿಗೆ ಹರಡಿರುವ ಪ್ರಕರಣಗಳು ಕಂಡುಬಂದಿದ್ದು ಈ ವೈರಸ್ ಅಲ್ಲಿ ಸ್ಥಳೀಯವಾಗಿದೆ. ಇಟಲಿಯಲ್ಲಿ ಗುರುವಾರ ಪ್ರಪ್ರಥಮ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ.
ಸ್ವೀಡನ್ ದೇಶದಲ್ಲಿ ಒಬ್ಬ ವ್ಯಕ್ತಿಗೆ ಮಂಕಿಪಾಕ್ಸ್ ರೋಗ ದೃಢಪಟ್ಟಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಇದುವರೆಗೆ ಒಟ್ಟು 9 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ.. ಕೆನಡಾ , ಅಮೆರಿಕಾದಲ್ಲೂ ಸೋಂಕು ಪತ್ತೆಯಾಗಿದೆ..
ವಿಜ್ಞಾನಿಗಳು ಮೊದಲ ಬಾರಿಗೆ ಈ ವೈರಸ್ ಅನ್ನ 1958 ರಲ್ಲಿ ಪತ್ತೆ ಹಚ್ಚಿದ್ದರು. ಆ ವರ್ಷ, ಸಂಶೋಧನಾ ಮಂಗಗಳಲ್ಲಿ ಪಾಕ್ಸ್ ತರಹ ಕಾಯಿಲೆಯ ಎರಡು ಪ್ರಕರಣಗಳು ಕಾಣಿಸಿಕೊಂಡಾಗ ವಿಜ್ಞಾನಿಗಳು ಇದನ್ನು ಗುರುತಿಸಿದರು. ಹಾಗಾಗಿ ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರನ್ನು ಇಡಲಾಯಿತು.
ಲಕ್ಷಣಗಳು
ಈ ಕಾಯಿಲೆಯು, ಸಾಮಾನ್ಯವಾಗಿ ಜ್ವರ, ಸ್ನಾಯು ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ, ಬಳಲಿಕೆ ಮತ್ತು ಮುಖದ ಮೇಲೆ ದದ್ದುಗಳು ಉಂಟಾಗುವುದೂ ಸೇರಿದಂತೆ ಮುಂತಾದ ಲಕ್ಷಣಗಳನ್ನು ಒಳಗೊಂಡಿದೆ.