ಮುಂಗಾರು ಅಬ್ಬರ – 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ…
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ವರುಣನ ಅಬ್ಬರ ಮುಂದುವರೆದಿದ್ದು, ಭಾರಿ ವರ್ಷದ ಧಾರೆಗೆ ಕರಾವಳಿ ಮತ್ತು ಮಲೆನಾಡಿನ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಕೊಡಗು, ಉಡುಪಿ, ಚಿಕ್ಕಮಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹವಾಮಾನ ಇಲಾಖೆ ಮತ್ತೆರಡು ದಿನ ಆರೆಂಜ್ ಅಲರ್ಟ್ ಸೂಚಿಸಿದೆ.
ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ನದಿ ಮತ್ತು ಸಮುದ್ರ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ 50ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಧಾರಾಕಾರ ಗಾಳಿ ಮಳೆಗೆ ಮೀನುಗಾರ ಕುಟುಂಬಗಳು ಆತಂಕದಲ್ಲಿದೆ.
ಕುಂದಾಪುರ ಭಾಗದ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು, ಕುಬ್ಜಾ ನದಿ ತುಂಬಿ ಹರಿಯುತ್ತಿದೆ. ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಮಳೆ ನೀರು ಹರಿದಿದೆ. ಪ್ರತಿವರ್ಷದಂತೆ ನದಿನೀರು ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸುತ್ತಿದ್ದಂತೆ ಅರ್ಚಕರು ದೇವಿಗೆ ಆರತಿಯನ್ನು ಬೆಳಗಿದರು.