ಕೋವಿಡ್-19 ಹಿನ್ನೆಲೆಯಲ್ಲಿ ಸಂಸತ್ ಮಾನ್ಸೂನ್ ಅಧಿವೇಶನವನ್ನು ಮೊಟಕುಗೊಳಿಸಲು ಸಂಸದರ ಒತ್ತಾಯ
ಹೊಸದಿಲ್ಲಿ, ಸೆಪ್ಟೆಂಬರ್20: ಸಂಸತ್ತಿನಲ್ಲಿ ನಡೆಯುತ್ತಿರುವ ಮಾನ್ಸೂನ್ ಅಧಿವೇಶನವನ್ನು ಕೋವಿಡ್ -19 ಹರಡುವಿಕೆಯ ತೀವ್ರತೆಯ ಹಿನ್ನೆಲೆಯಲ್ಲಿ ಮೊಟಕುಗೊಳಿಸಲು ಸಂಸದರು ಒಮ್ಮತದಿಂದ ಒತ್ತಾಯಿಸಿದ್ದಾರೆ.
ಮಸೂದೆಗಳನ್ನು ಅಂಗೀಕರಿಸುವಂತೆ ಸರ್ಕಾರ ಒತ್ತಾಯಿಸುತ್ತಿರುವುದರಿಂದ ಮತ್ತು ನಿರ್ಣಾಯಕ ವಿಷಯಗಳ ಕುರಿತು ಚರ್ಚೆಯನ್ನು ನಡೆಸಲು ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದರಿಂದ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಧಿವೇಶನವನ್ನು ಮುಕ್ತಾಯಗೊಳಿಸುವ ದಿನಾಂಕಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಕೊವಿಡ್ ಹರಡುವಿಕೆಯ ವಿರುದ್ಧ ಹಲವಾರು ಪ್ರೋಟೋಕಾಲ್ಗಳೊಂದಿಗೆ ಸೆಪ್ಟೆಂಬರ್ 14 ರಂದು ಪ್ರಾರಂಭವಾದ ಮಾನ್ಸೂನ್ ಅಧಿವೇಶನವು ಅಕ್ಟೋಬರ್ 1 ರಂದು ಕೊನೆಗೊಳ್ಳಲು ನಿರ್ಧರಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರದ ಕೆಲ ಸಚಿವರು ಹಾಗೂ ಸಂಸದರಿಗೆ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಅಧಿವೇಶನವನ್ನು ಶೀಘ್ರವಾಗಿ ಮುಕ್ತಾಯಗೊಳಿಸಲು ಸಂಸದರು ಒತ್ತಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶನಿವಾರ ಮಧ್ಯಾಹ್ನ, ಸ್ಪೀಕರ್ ಬಿರ್ಲಾ ಅವರು ಸಂಸದೀಯ ಸಲಹಾ ಸಮಿತಿಯ ತುರ್ತು ಸಭೆ ಸಭೆ ನಡೆಸಿ ಅಧಿವೇಶನದ ಕಡಿತದ ಬಗ್ಗೆ ಚರ್ಚಿಸಿದರು. ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಅಧಿವೇಶನವನ್ನು ಮೊಟಕುಗೊಳಿಸುವ ಬಗ್ಗೆ ಒಮ್ಮತವಿತ್ತು ಎಂದು ಸಭೆಯ ನಂತರ ಪ್ರಾದೇಶಿಕ ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.
ಸಭೆಯಲ್ಲಿ, ಸರ್ಕಾರವು ತಾನು ಪಟ್ಟಿ ಮಾಡಿದ ಎಲ್ಲಾ ಮಸೂದೆಗಳನ್ನು ಅಂಗೀಕರಿಸಲು ಬಯಸಿದೆ ಎಂದು ಒತ್ತಾಯಿಸಿದೆ. ಕೋವಿಡ್ -19 ಪರಿಸ್ಥಿತಿ, ಆರ್ಥಿಕ ಮಂದಗತಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ 193 ರ ಅಡಿಯಲ್ಲಿ ವಿಷಯಗಳ ಬಗ್ಗೆ ವಿವರವಾದ ಚರ್ಚೆಯನ್ನು ಬಯಸಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದ್ದರೆ, ತೃಣಮೂಲ ಕಾಂಗ್ರೆಸ್ ಜಿಎಸ್ಟಿ ಪರಿಹಾರದ ಬಗ್ಗೆ ಚರ್ಚಿಸಲು ಬಯಸಿದೆ ಎಂದು ಹೇಳಿದೆ. ಕೆಟ್ಟ ಪರಿಸ್ಥಿತಿಯಲ್ಲಿ ನಾವು ಕೋವಿಡ್ ಪರಿಸ್ಥಿತಿಯನ್ನಾದರೂ ಚರ್ಚಿಸಲು ಬಯಸುತ್ತೇವೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮುಂಬರುವ ದಿನಗಳಲ್ಲಿ ಲೋಕಸಭೆಯು ಇನ್ನೂ ಆರು ಮಸೂದೆಗಳಿಗೆ ಸಮಯ ನಿಗದಿಪಡಿಸಬೇಕು ಎಂದು ಶುಕ್ರವಾರ ಸರ್ಕಾರ ಬಯಸಿದೆ. ಇದು ಜಮ್ಮು ಮತ್ತು ಕಾಶ್ಮೀರ ಅಧಿಕೃತ ಭಾಷಾ ಮಸೂದೆ, ವಿದೇಶಿ ನಿಯಂತ್ರಣ (ತಿದ್ದುಪಡಿ) ಮಸೂದೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆ ಸೇರಿದಂತೆ ಮೂರು ಕಾರ್ಮಿಕ ಸಂಬಂಧಿತ ಮಸೂದೆಗಳನ್ನು ಒಳಗೊಂಡಿದೆ .








