ಮಹಿಳಾ ಪ್ರೀಮಿಯರ್ ಲೀಗ್ ನ ಮೂರನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದೆ.
ಈ ಗೆಲುವಿನ ಮೂಲಕ ಮುಂಬಯಿ ಇಂಡಿಯನ್ಸ್ ತಂಡವು ಸರಣಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಟಾಸ್ ಗೆದ್ದ ಮುಂಬಯಿ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮೊದಲ ಪಂದ್ಯದಂತೆಯೇ ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಗೆ 129 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬಯಿ ಇಂಡಿಯನ್ಸ್ ತಂಡವು 18.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದು.
ಗುಜರಾತ್ ಜೈಂಟ್ಸ್ ಗೆ ಆರಂಭಿಕ ಲಾಭ ಸಿಗಲಿಲ್ಲ. ವೇದಾ ಕೃಷ್ಣಮೂರ್ತಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಹರ್ಲೀನ್ ಡಿಯೋಲ್ ಕೂಡ 8 ರನ್ಗಳಿಸಿದರು. ಉಳಿದಂತೆ ಫೋಬೆ ಲಿಚ್ಫೀಲ್ಡ್ 7, ದಯಾಳನ್ ಹೇಮಲತಾ 3, ಆಶ್ಲೇ ಗಾರ್ಡ್ನರ್ 15, ನಾಯಕಿ ಬೆಥ್ ಮೂನಿ 22 ರನ್ ಗಳಿಸಿದರು. ಕ್ಯಾಥರಿನ್ ಎಮ್ಮಾ ಬ್ರೈಸ್ 25 ಹಾಗೂ ತನುಜಾ ಕನ್ವರ್ 28 ರನ್ ಗಳಿಸಿದರು. ಪರಿಣಾಮವಾಗಿ ತಂಡವು 128 ರನ್ ಗಳಿಸಿತು. ಮುಂಬಯಿ ಪರ ಅಮೆಲಿಯಾ ಕೆರ್ 4 ವಿಕೆಟ್ ಪಡೆದರೆ, ಶಬ್ನಿಮ್ ಇಸ್ಮಾಯಿಲ್ 3 ವಿಕೆಟ್ ಪಡೆದು ಮಿಂಚಿದರು.
ಅಲ್ಪ ಗುರಿ ಬೆನ್ನಟ್ಟಿದ ಮುಂಬಯಿ ತಂಡಕ್ಕೆ ಕೂಡ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾದ ಯಾಸ್ತಿಕಾ ಭಾಟಿಯಾ ಹಾಗೂ ಹೇಲಿ ಮ್ಯಾಥ್ಯೂಸ್ ತಲಾ 7 ರನ್ ಕಲೆ ಹಾಕಿ ಔಟ್ ಆದರು. ನ್ಯಾಟ್ ಸ್ಕಿವರ್-ಬ್ರಂಟ್ 22 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಹರ್ಮನ್ಪ್ರೀತ್ ಅಜೇಯ 46 ರನ್ ಸಿಡಿಸಿದರೆ, ಅಮೆಲಿಯಾ ಕೆರ್ 31 ರನ್ ಗಳ ಗೆಲುವಿನ ಇನ್ನಿಂಗ್ಸ್ ಕಟ್ಟಿದರು.