ಬೆಂಗಳೂರು: ನನ್ನ ತಂದೆ ಜನರ ಸೇವೆಗಾಗಿ ಆರೋಗ್ಯವನ್ನೂ ಲೆಕ್ಕಿಸುತ್ತಿಲ್ಲ. ಜನರಿಗಾಗಿ ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ತಂದೆಯ ಆರೋಗ್ಯದ ಬಗ್ಗೆ ಮಾತನಾಡಿದ ನಿಖಿಲ್, ಕಳೆದ 15 ದಿನಗಳಿಂದ ನಿರಂತರ ಓಡಾಟ ನಡೆಸಿದ್ದಾರೆ. ಕೆಲಸದ ಒತ್ತಡದಿಂದಾಗಿ ಮೂಗಿನಲ್ಲಿ ರಕ್ತಸ್ರಾವ ಉಂಟಾಗಿದೆ. ಆದರೆ, ಜನರು, ಕಾರ್ಯಕರ್ತರು ಆತಂಕ ಪಡುವುದು ಬೇಡ. ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಕೆಲಸದ ಒತ್ತಡಗಳು ಇದ್ದವು. ಕಳೆದ 15 ದಿನಗಳಿಂದ ನಿರಂತರ ಓಡಾಟ ಇತ್ತು. ಬೆಳಗ್ಗೆ 4.30ಕ್ಕೆ ಎದ್ದೇಳುತ್ತಿದ್ರು, ಮಲಗುವುದು ಸುಮಾರು 1 ಗಂಟೆ ಮಧ್ಯ ರಾತ್ರಿ ಆಗುತ್ತಿತ್ತು. ವೈದ್ಯರು ಆತಂಕ ಪಡುವುದು ಬೇಡ ಅಂದಿದ್ದಾರೆ. ಈಗ ನನ್ನ ತಂದೆ ಆರೋಗ್ಯವಾಗಿದ್ದಾರೆ. ಆರೋಗ್ಯ ಲೆಕ್ಕಿಸದೇ ಸಂಸತ್‌ನಲ್ಲಿ ಮಾತಾಡಿದ್ದಾರೆ ಎಂದು ಹೇಳಿದ್ದಾರೆ.
ರಾತ್ರಿ ಪುಸ್ತಕಗಳನ್ನು ಹೆಚ್ಚು ಓದುತ್ತಾರೆ. ರಾಜ್ಯದ ಜನರಿಗೆ ಏನಾದರೂ ಮಾಡಬೇಕು ಅಂತ ಕೆಲಸ ಮಾಡುತ್ತಿದ್ದಾರೆ. ಈಶ್ವರನ ನಂಬಿಕೊಂಡಿದ್ದೇವೆ, ಜನ, ರೈತರ ಆಶೀರ್ವಾದ ಇದೆ. ಅವರ ಆರೋಗ್ಯಕ್ಕೆ ಏನೂ ಆಗುವುದಿಲ್ಲ ಎಂದು ಹೇಳಿದ್ದಾರೆ.








