Nalin Kumar Kateel | ಭಯ ಸಿದ್ದರಾಮಯ್ಯರನ್ನ ಹುಚ್ಚನಾಗಿಸಿದೆ
ಧಾರವಾಡ : ನಾಳೆ ಡಿಕೆಶಿವಕುಮಾರ್ ಅವರನ್ನು ಸಿಎಂ ಮಾಡ್ತಾರೆ ಎಂಬ ಭಯ ಇದೆ, ಆ ಭಯವೇ ಸಿದ್ದರಾಮಯ್ಯ ಅವರನ್ನು ಹುಚ್ಚನ್ನಾಗಿ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಕಾಂಗ್ರೆಸ್ ಪಾದಯಾತ್ರೆ ಈಗ ಆರಂಭವಾಗಿದೆ. ನಮ್ಮ ಪಕ್ಷ ಬೆಳೆದಿರುವುದೇ ಯಾತ್ರೆಯಿಂದ.
ನಾವು ಅಧಿಕಾರಕ್ಕೆ ಬಂದಿರುವುದೇ ಯಾತ್ರೆಯಿಂದ. ಸಿದ್ದರಾಮಣ್ಣ ಯಡಿಯೂರಪ್ಪರಿಗೆ ಹೇಳ್ತಾರೆ, ನೀವು ಎರಡು ಕಿಲೋ ಮೀಟರ್ ನಡೆಯಬೇಕು ಅಂತಾ.
ಸಿದ್ದರಾಮಣ್ಣ ಯಾರ ಯಾರ ಬಳಿ ಭಿಕ್ಷೆ ಬೇಡಿ ಕಾಲು ಬಿದ್ದು ಸಿಎಂ ಆದವರು. ದೇವೇಗೌಡರ ಕಾಲಿಗೆ ಅಡ್ಡ ಬಿದ್ದು ನಮಸ್ಕಾರ ಮಾಡಿ ರಾಜಕಾರಣದಲ್ಲಿ ಬೆಳೆದವರು.
ಅವರ ಕಾಲಡಿಯಲ್ಲಿ ಕುಳಿತು ಕಾಲಲ್ಲೆ ತುಳಿದರು. ಇಂದಿರಾ ಗಾಂಧಿಗೆ ಕೆಟ್ಟ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರು.

ಕೊನೆಗೆ ಸೋನಿಯಾ ಕಾಲಿಗೆ ಬಿದ್ದು ಸಿಎಂ ಆದರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಯಡಿಯೂರಪ್ಪ ಈ ರಾಜ್ಯದಲ್ಲಿ ಮಾಡಿದಷ್ಟು ಪಾದಯಾತ್ರೆ, ಯಡಿಯೂರಪ್ಪ ಮಾಡಿದಷ್ಟು ಸೈಕಲ್ ಯಾತ್ರೆ ಯಾರಿಂದಲೂ ಮಾಡೊಕೆ ಆಗಿಲ್ಲ.
ಯಡಿಯೂರಪ್ಪರಿಗೆ ಹೇಳುವ ಅವಶ್ಯಕತೆ ಇಲ್ಲ, ಕಾಂಗ್ರೆಸ್ ಯಾತ್ರೆ ಕಲಿತಿದ್ದೇ ನಮ್ಮಿಂದ. ಕಾಂಗ್ರೆಸ್ ಯಾತ್ರೆ ಶಬ್ದ ಕಲಿದ್ದು ನಮ್ಮಿಂದ.
ಸಿದ್ದರಾಮಣ್ಣನಿಗೆ ಅರಳು ಮರಳು ಹಿಡಿದಿದೆ. ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಹುಚ್ಚರಾಗಿದ್ದಾರೆ ಎಂದು ಕಟೀಲ್ ವಾಗ್ದಾಳಿ ನಡೆಸಿದ್ದಾರೆ.








