ರಾಜ್ಯದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆಗೆ ಕರ್ನಾಟಕ ಸರ್ಕಾರ ಮತ್ತೊಂದು ಆರ್ಥಿಕ ಆಘಾತ ನೀಡಿದೆ. ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಕಂದಾಯ ಭೂಮಿಗಳಲ್ಲಿ ವಾಸವಿರುವ ಹಾಗೂ ಭೂ ಕಂದಾಯ ಕಾಯ್ದೆಯನ್ವಯ ಸಕ್ರಮಗೊಂಡಿರುವ ಮನೆ ಮತ್ತು ನಿವೇಶನಗಳಿಗೆ ನೀಡಲಾಗುವ ಇ-ಸ್ವತ್ತು ಖಾತೆಗಳಲ್ಲಿ ಮಾಲೀಕರ ಹೆಸರು ಸೇರ್ಪಡೆ ಅಥವಾ ಬದಲಾವಣೆ ಮಾಡಬೇಕಾದರೆ ಇನ್ನು ಮುಂದೆ ರೂ.1,000 ಶುಲ್ಕ ಪಾವತಿಸಬೇಕಾಗುತ್ತದೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಿದೆ. ಈ ಕ್ರಮ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 94(ಸಿ), 94(ಸಿ.ಸಿ) ಮತ್ತು 94(ಡಿ) ಅಡಿಯಲ್ಲಿ ಸಕ್ರಮಗೊಂಡಿರುವ ಮನೆಗಳಿಗೆ ಅನ್ವಯವಾಗಲಿದೆ. ಇ-ಸ್ವತ್ತು ತಂತ್ರಾಂಶದ ಮೂಲಕ ನೀಡುವ ನಮೂನೆ-9 ಮತ್ತು 11ಎ ದಾಖಲೆಯಲ್ಲಿನ ಮಾಲೀಕತ್ವದ ವಿವರ ಬದಲಾವಣೆಗೆ ಈ ಶುಲ್ಕ ವಿಧಿಸಲಾಗುವುದು.
ಹೆಸರು ಬದಲಾವಣೆಗೆ ಯಾವಾಗ ಶುಲ್ಕ ಅನ್ವಯ?
ಖಾತೆದಾರರು ಈ ಶುಲ್ಕವನ್ನು ಖಾತೆ ವಿತರಿಸಿದ ದಿನಾಂಕದಿಂದ ಒಂದು ವರ್ಷದೊಳಗೆ ಪಾವತಿಸಬೇಕು.
ಪಾವತಿಯನ್ನು ಗರಿಷ್ಠ ನಾಲ್ಕು ಕಂತುಗಳಲ್ಲಿ ಮಾಡಬಹುದು.
ಒಬ್ಬರ ಹೆಸರಿನಲ್ಲಿ ಇರುವ ಖಾತೆಗೆ ಹೆಚ್ಚುವರಿ ಮಾಲೀಕರ ಹೆಸರನ್ನು ಸೇರಿಸಲು, ತಂದೆಯಿಂದ ಮಗನಿಗೆ ವರ್ಗಾವಣೆ, ಅಥವಾ ಖರೀದಿ-ಮಾರಾಟದ ಸಂದರ್ಭದಲ್ಲಿ ಹೆಸರನ್ನು ಬದಲಾಯಿಸಲು ಈ ನಿಯಮ ಅನ್ವಯವಾಗುತ್ತದೆ.
ಒಂದು ವರ್ಷದೊಳಗೆ ಶುಲ್ಕ ಪಾವತಿಸದಿದ್ದರೆ, ಇ-ಸ್ವತ್ತು ದಾಖಲೆ ನಿಷ್ಕ್ರಿಯವಾಗಲಿದೆ. ನಂತರ ಹೆಸರು ಬದಲಾಯಿಸಲು ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ.
ಸಾಮಾನ್ಯ ಜನರಿಗೆ ಮತ್ತಷ್ಟು ಹೊರೆ
ಈ ಹೊಸ ನಿಯಮವು ಗ್ರಾಮೀಣ ಜನರ ಮೇಲೆ ಇನ್ನಷ್ಟು ಆರ್ಥಿಕ ಒತ್ತಡ ತಂದಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಇ-ಸ್ವತ್ತು ತಂತ್ರಾಂಶದ ಸಹಾಯದಿಂದಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಖಾತೆಗಳನ್ನು ವಿತರಿಸುತ್ತಿದ್ದಾರೆ. ಸರಳೀಕರಣ ಉದ್ದೇಶದ ಈ ಕ್ರಮ, ಜನಸಾಮಾನ್ಯರಿಗೆ ಮತ್ತಷ್ಟು ಆರ್ಥಿಕ ಹೊರೆ ಹೊರಿಸಿದೆ.








