ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿಯಲ್ಲಿ ಬಲಿಷ್ಠ ಸೌತ್ ಆಫ್ರಿಕಾ ತಂಡವನ್ನ ಮಣಿಸಿ ಅಚ್ಚರಿ ಮೂಡಿಸಿದ್ದ ನೆದರ್ಲೆಂಡ್ಸ್, ಶ್ರೀಲಂಕಾ ವಿರುದ್ಧವೂ ಶ್ಲಾಘನೀಯ ಪ್ರದರ್ಶನ ನೀಡಿದೆ.
ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಕೆಳ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವಾಡಿದ ಎನ್ಗೆಲ್ಬ್ರೆಕ್ಟ್(70) ಹಾಗೂ ವ್ಯಾನ್ ಬೀಕ್(59) 7ನೇ ವಿಕೆಟ್ಗೆ ಬರೋಬ್ಬರಿ 130 ರನ್ಗಳ ಜೊತೆಯಾಟವಾಡಿದರು. ಇವರ ಅತ್ಯುತ್ತಮ ಜೊತೆಯಾಟದ ಮೂಲಕ ನೆದರ್ಲೆಂಡ್ಸ್ 262 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಯಿತು.
ಶ್ರೀಲಂಕಾ ಬೌಲಿಂಗ್ ದಾಳಿಯ ವಿರುದ್ಧ ಅತ್ಯುತ್ತಮ ಆಟವಾಡಿದ ಎನ್ಗೆಲ್ಬ್ರೆಕ್ಟ್(70 ರನ್, 82 ಬಾಲ್, 4 ಬೌಂಡರಿ, 1 ಸಿಕ್ಸ್) ಹಾಗೂ ವ್ಯಾನ್ ಬೀಕ್(59 ರನ್, 75 ಬಾಲ್, 1 ಬೌಂಡರಿ, 1 ಸಿಕ್ಸ್) ಏಕದಿನ ವಿಶ್ವಕಪ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ಹಿಂದೆ ಏಕದಿನ ವಿಶ್ವಕಪ್ನಲ್ಲಿ 7 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಹೆಚ್ಚು ರನ್ಗಳ ಜೊತೆಯಾಟವಾಡಿದ ದಾಖಲೆ ಭಾರತ ಕಪಿಲ್ ದೇವ್ ಹಾಗೂ ಸೈಯದ್ ಕಿರ್ಮಾನಿ ಅವರ ಹೆಸರಿನಲ್ಲಿತ್ತು. ಭಾರತದ ಈ ಜೋಡಿ 1983ರ ವಿಶ್ವಕಪ್ನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 9ನೇ ವಿಕೆಟ್ಗೆ 126 ರನ್ಗಳಿಸಿ ದಾಖಲೆ ಬರೆದಿದ್ದರು.
ಆದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 7ನೇ ವಿಕೆಟ್ಗೆ 130 ರನ್ಗಳ ಜೊತೆಯಾಟವಾಡಿದ ಎನ್ಗೆಲ್ಬ್ರೆಕ್ಟ್ ಹಾಗೂ ವ್ಯಾನ್ ಬೀಕ್ ಇದೀಗ ಏಕದಿನ ವಿಶ್ವಕಪ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೇ ಏಕದಿನ ವಿಶ್ವಕಪ್ನಲ್ಲಿ 7ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದ 7ನೇ ಜೋಡಿ ಎಂಬ ಹೆಗ್ಗಳಿಕೆ ಸಹ ಪಡೆದುಕೊಂಡಿದ್ದಾರೆ.
NED v SL, Netherlands, Team India, ODI Cricket, World Cup