ಶತಮಾನಗಳ ಭಾರತ – ನೇಪಾಳ ಬಾಂಧವ್ಯಕ್ಕೆ ಎಳ್ಳುನೀರು ಬಿಡಲು ಮೊದಲ ಹೆಜ್ಜೆ ಇಟ್ಟ ನೇಪಾಳ

ಕಠ್ಮಂಡು, ಜೂನ್ 14: ನೇಪಾಳ ಸಂಸತ್ತು ಭಾರತದ ಭೂಪ್ರದೇಶವನ್ನು ನೇಪಾಳದೆಂದು ತೋರಿಸುವ ಹೊಸ ರಾಜಕೀಯ ನಕ್ಷೆಯನ್ನು ಅಂಗೀಕರಿಸಿದೆ.
ಭಾರತದ ಭೂಪ್ರದೇಶವಾಗಿರುವ ಕಾಲಾಪಾನಿ, ಲಿಪುಲೇಖ್ ಹಾಗು ಲಿಂಪಿಯಾಧುರಾ ಪ್ರದೇಶಗಳನ್ನು ನೇಪಾಳದೆಂದು ಗುರುತಿಸಲಾಗಿರುವ ಈ ಹೊಸ ರಾಜಕೀಯ ನಕ್ಷೆಯನ್ನು ನೇಪಾಳ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದೆ.
275 ಸಂಸದರನ್ನು ಹೊಂದಿರುವ ನೇಪಾಳ ಸಂಸತ್ತಿನಲ್ಲಿ ಇಂದು 258 ಸಂಸದರು ಹಾಜರಿದ್ದು ಎಲ್ಲರೂ ಹೊಸ ನಕ್ಷೆ ಪರವಾಗಿ ಮತ ಚಲಾಯಿಸಿದರು. ಭಾರತದ ತೀವ್ರ ವಿರೋಧದ ನಡುವೆಯೂ ನೇಪಾಳ ಸಂಸತ್ತು ಹೊಸ ನಕ್ಷೆಯನ್ನು 258 ಮತಗಳನ್ನು ಪಡೆಯುವ ಮೂಲಕ ಅಂಗೀಕರಿಸಿದೆ. ಅಷ್ಟು ಮಾತ್ರವಲ್ಲ ಹೊಸ ನಕ್ಷೆ ಶಾಶ್ವತವಾದದ್ದು ಅಂತ ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ ಹೇಳಿದ್ದಾರೆ.

ಉತ್ತರಾಖಂಡದ ಧಾರ್ಚುಲಾದಲ್ಲಿ ಮೇ 8 ರಂದು ಲಿಪುಲೆಖ್ ಪಾಸ್ನ್ನು ಸಂಪರ್ಕಿಸುವ 80 ಕಿ.ಮೀ ಉದ್ದದ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ ನಂತರ ಭಾರತ ಮತ್ತು ನೇಪಾಳ ಸಂಬಂಧಗಳು ಬಿಗಡಾಯಿಸಿದ್ದು, ಭಾರತದ ಭೂಭಾಗವನ್ನು ತನ್ನದೆಂದು ತೋರಿಸುವ ಹೊಸ ರಾಜಕೀಯ ನಕ್ಷೆಯನ್ನು ರಚಿಸಿತ್ತು.

ಇದಕ್ಕೆ ಸಂಬಂಧಿಸಿದಂತೆ ಭಾರತವು ನೇಪಾಳಕ್ಕೆ ಯಾವುದೇ ಐತಿಹಾಸಿಕ ಪುರಾವೆಯಿಲ್ಲದ ಹೊಸ ನಕ್ಷೆಯನ್ನು ಅಂಗೀಕರಿಸದಂತೆ ಕಠಿಣವಾಗಿಯೇ ತಿಳಿಸಿತ್ತು. ಆದರೆ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಭಾರತ ನಮ್ಮ ಭೂಪ್ರದೇಶವನ್ನು ತನ್ನದೆಂದು ಸುಳ್ಳು ಹೇಳುತ್ತಿದೆ, ಕಾಳಿ ದೇವಾಲಯವನ್ನು ನಿರ್ಮಿಸಿ, ಕೃತಕ ಕಾಳಿ ನದಿಯನ್ನು ಸೃಷ್ಟಿಸಿ ನಮಗೆ ಮೋಸ ಮಾಡಿದೆ ಎಂದು ಆರೋಪಗಳ ಪಟ್ಟಿಯನ್ನು ಭಾರತದ ಮೇಲೆ ಮಾಡಿದ್ದರು. ಇದೀಗ ಭಾರತದ ಭೂಭಾಗವನ್ನು ತನ್ನದೆಂದು ತೋರಿಸುವ ಹೊಸ ನಕ್ಷೆಯನ್ನು ಅಂಗೀಕರಿಸುವ ಮೂಲಕ ಶತಮಾನಗಳ ಭಾರತ ಮತ್ತು ನೇಪಾಳ ಬಾಂಧವ್ಯಕ್ಕೆ ಎಳ್ಳುನೀರು ಬಿಡಲು ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ.








