ರಾಜ್ಯ ಸರ್ಕಾರದ ನೂತನ ಸಚಿವರಿಗೆ ಸರ್ಕಾರವು ಹೊಸ ಕಾರಿನ ಭಾಗ್ಯ (Car gift) ನೀಡಿದೆ. ಎಲ್ಲ 33 ಸಚಿವರಿಗೆ ಹೊಸ ಇನ್ನೋವಾ ಹೈಕ್ರಾಸ್-ಹೈಬ್ರಿಡ್ (Innova Hycross Hybrid) ಎಂಪಿವಿ ಕಾರು ಖರೀದಿಗಾಗಿ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ.
ಸರ್ಕಾರ ಖರೀದಿಸುತ್ತಿರುವ ಒಂದು ಕಾರಿನ ಬೆಲೆ 30 ಲಕ್ಷ ರೂ.(ಜಿಎಸ್‌ಟಿ ಒಳಗೊಂಡಂತೆ ಎಕ್ಸ್ ಶೋ ರೂಮ್ ಬೆಲೆ) ನಂತೆ 33 ಕಾರು ಖರೀದಿಗೆ ಒಟ್ಟು 9.90 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಟೊಯೋಟಾ ಕಿರ್ಲೋಸ್ಕರ್ ಕಂಪನಿಯಿಂದ ನೇರವಾಗಿ ಕಾರು ಖರೀದಿಸಲಾಗುತ್ತಿದೆ.
ಈ ಕಾರನ್ನು ಕಂಪನಿಯು 2022ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಈ ಕಾರು 8 ವಿವಿಧ ಮಾದರಿಯಲ್ಲಿವೆ. ಕಾರಿನ ಬೆಲೆ 18.30 ಲಕ್ಷ ರೂ.ನಿಂದ ಆರಂಭಗೊಂಡು ಟಾಪ್ ಮಾಡೆಲ್ ಕಾರಿಗೆ 30.26 ಲಕ್ಷ ರೂ. ವರೆಗೆ ಇದೆ. ಅಲ್ಲದೇ, ತೆರಿಗೆ, ಜಿಎಸ್ ಟಿ ಸೇರಿದಾಗ ಇದರ ಬೆಲೆ ಇನ್ನೂ ಹೆಚ್ಚಳವಾಗುತ್ತದೆ.